- ಇಡೀ ವಿಶ್ವಾದ್ಯಂತ 114 ಕೋಟಿ ರೂ. ಗಳಿಕೆ ಮಾಡಿದ ರಿತೇಶ್ ಸಿನಿಮಾ
- ಮರಾಠಿ ಚಿತ್ರರಂಗದ ಇತಿಹಾಸದಲ್ಲಿಯೇ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ
- ಹಲವು ಸಾಧನೆಯ ಮೈಲಿಗಲ್ಲು ಸ್ಥಾಪಿಸಿದ ಐತಿಹಾಸಿಕ ಚಿತ್ರ
ರಿತೇಶ್ ದೇಶಮುಖ್ ನಟಿಸಿ, ನಿರ್ದೇಶಿಸಿದ್ದ ‘ರಾಜಾ ಶಿವಾಜಿ’ ಮರಾಠಿ ಚಿತ್ರರಂಗದಲ್ಲಿ ಮೈಲಿಗಲ್ಲು ಸಾಧಿಸಿದೆ. ಕಳೆದ ಮೇ 1ರಂದು ರಿಲೀಸ್ ಆಗಿದ್ದ ಈ ಸಿನಿಮಾ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ ಏಳು ದಿನಕ್ಕೆ 57.70 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಮೊದಲ ವಾರದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಮರಾಠಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ 19 ದಿನಗಳಲ್ಲಿ ವಿಶ್ವಾದ್ಯಂತ 114.80 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಇಡೀ ಮರಾಠಿ ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹಿರಿಮೆಗೆ ‘ರಾಜಾ ಶಿವಾಜಿ’ ಪಾತ್ರವಾಗಿದೆ. ಈ ಹಿಂದೆ ನಾಗಾರಾಜ್ ಮಂಜುಳೆ ನಿರ್ದೇಶನದ ‘ಸೈರಾಟ್’ (2016) 110 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಮೊದಲ ಸ್ಥಾನದಲ್ಲಿತ್ತು. ಹತ್ತು ವರ್ಷಗಳ ಬಳಿಕ ‘ರಾಜಾ ಶಿವಾಜಿ’ ಆ ದಾಖಲೆ ಮುರಿದು, ಅಗ್ರಸ್ಥಾನ ಅಲಂಕರಿಸಿದೆ. ವಿಶ್ವಾದ್ಯಂತ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ‘ರಾಜಾ ಶಿವಾಜಿ’ ಚಿತ್ರ ದೇಶಾದದ್ಯಂತ ಒಟ್ಟು 109. 90 ಕೋಟಿ ರೂ. ಮತ್ತು ವಿದೇಶದಲ್ಲಿ 4.90 ಕೋಟಿ ರೂ. ಗಳಿಕೆ ಮಾಡಿ, ಗೆಲುವಿನ ಮಿಂಚಿನ ಓಟ ಮುಂದುವರಿಸಿದೆ. ರಿತೇಶ್ ದೇಶಮುಖ್ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ಸಂಜಯ್ ದತ್, ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್, ಜೆನಿಲಿಯಾ ಡಿ’ಸೋಜಾ ಕಲಾ ಬಳಗದಲ್ಲಿದ್ದರು. ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. -ಏಜೆನ್ಸೀಸ್