Bail Petition: ಭಾರತದಲ್ಲೇ ಸಂಚಲನ ಮೂಡಿಸಿದ್ದ ಮೇಘಾಲಯದಲ್ಲಿ ಹನಿಮೂನ್ಲ್ಲಿದ್ದಾಗ ನಡೆದ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಪತ್ನಿ ಸೋನಂ ರಘುವಂಶಿ ಜಾಮೀನು ನೀಡುವಂತೆ ಕೋರಿ ಸ್ಥಳೀಯ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಶನಿವಾರ(ಸೆ. 13) ವರದಿಯಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇಘಾಲಯ ಪೊಲೀಸರು ಸಲ್ಲಿಸರುವ ಚಾರ್ಜ್ಶೀಟ್ನಲ್ಲಿ ಹಲವು 'ದೋಷ'ಗಳಿವೆ ಎಂದು ಆರೋಪಿಸಿ ಸೋನಂ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಸೊಹ್ರಾ ಉಪವಿಭಾಗದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಕೆಯ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ನಿಗದಿಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ತುಷಾರ್ ಚಂದ್ರ, ಶುಕ್ರವಾರ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ, ಆದರೆ ಪ್ರಾಸಿಕ್ಯೂಷನ್ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಲು ಸಮಯ ಕೇಳಿದೆ ಎಂದು ಹೇಳಿದ್ದಾರೆ.
ರಾಜಾ ರಘುವಂಶಿ ಮೇಘಾಲಯಕ್ಕೆ ಹನಿಮೂನ್ಗೆ ಹೋದಾಗ ಸೊಹ್ರಾದಲ್ಲಿನ ವೈಸಾವ್ಡಾಂಗ್ ಬಳಿಯ ನಿರ್ಜನ ಪಾರ್ಕಿಂಗ್ ಸ್ಥಳದಲ್ಲಿ ಮೂವರು ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿದ್ದರು. ರಘುವಂಶಿ ಪತ್ನಿ ಮತ್ತು ಆಕೆಯ ಗೆಳೆಯ ರಾಜ್ ಕುಶ್ವಾಹ ಕೊಲೆಗೆ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.
ಈ ವರ್ಷದ ಮೇ ತಿಂಗಳಲ್ಲಿ ಹನಿಮೂನ್ಗಾಗಿ ಮೇಘಾಲಯಕ್ಕೆ ಹೋದ ರಾಜಾ ಮತ್ತು ಸೋನಮ್ ನಾಪತ್ತೆಯಾಗಿದ್ದರು ಎಂದು ಮೊದಲು ಸುದ್ದಿಯಾಗಿತ್ತು. ಬಳಿಕ ವ್ಯಾಪಕ ಶೋಧ ಕಾರ್ಯಾಚರಣೆಯಾಗಿ ಅಂತಿಮವಾಗಿ ರಾಜಾ ಅವರ ಮೃತದೇಹ ಪತ್ತೆಯಾಗಿತ್ತು. ಆದರೆ ಪತ್ನಿ ಸೋನಂ ಪತ್ತೆಯಾಗಿರಲಿಲ್ಲ. ಈ ವೇಳೆ ಪತ್ನಿಯೇ ಗಂಡನನ್ನು ಕೊಲೆ ಮಾಡಿದ್ದಾಳೆ ದೊಡ್ಡ ಸುದ್ದಿಯಾಗಿತ್ತು. ಆ ಬಳಿಕ ಮೇಘಾಲಯದ ತನಿಖಾಧಿಕಾರಿಗಳು ಇತರ ಆರೋಪಿಗಳನ್ನು ಬಂಧಿಸುತ್ತಿದ್ದಂತೆ ಸೋನಮ್ ಉತ್ತರ ಪ್ರದೇಶದ ಪೊಲೀಸರ ಮುಂದೆ ಶರಣಾಗಿದ್ದಳು.
ಕಳೆದ ವಾರ ಮೇಘಾಲಯ ಪೊಲೀಸರು ಸೋನಮ್, ರಾಜ್ ಮತ್ತು ಮೂವರು ಕೊಲೆಗಾರರಾದ ವಿಶಾಲ್ ಸಿಂಗ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ ವಿರುದ್ಧ 790 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. (ಏಜೆನ್ಸೀಸ್)