ನ್ಯೂಸ್

ವಿವಾದದ ಅಲೆಯಲ್ಲಿ 2 ಬಹುನಿರೀಕ್ಷಿತ ಚಿತ್ರಗಳು ಫ್ಲಾಪ್​! ಯುವ ನಟನಿಗೆ ಶುರುವಾಯ್ತು ಅಗ್ನಿಪರೀಕ್ಷೆ

ತೆಲಂಗಾಣ: ಕಳೆದ ಒಂದೆರೆಡು ತಿಂಗಳಿಂದ ಟಾಲಿವುಡ್​ ಕಂಗಾಲಾಗಿದ್ದು, ಯುವ ನಟನ ಪ್ರೇಮ ತ್ರಿಕೋನ ವಿವಾದವೊಂದು ಸದ್ಯ ಚಿತ್ರರಂಗದಲ್ಲಿ ದೊಡ್ಡ ಸಂಚಲವನ್ನೇ ಹುಟ್ಟುಹಾಕಿದೆ. ಪ್ರೀತಿ ಹೆಸರಲ್ಲಿ ತನಗೆ ನಂಬಿಕೆ ದ್ರೋಹ ಬಗೆದಿರುವ ರಾಜ್ ತರುಣ್​, ವಂಚನೆ ಮಾಡಿ, ಸಹ ನಟಿ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ನಟನ ಪ್ರೇಯಸಿ ಲಾವಣ್ಯ ನರಸಿಂಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ನಟನಿಗೆ ಹೈಕೋರ್ಟ್​ ಜಾಮೀನು ಕೂಡ ನೀಡಿ ಬಿಗ್ ರಿಲೀಫ್​​ ಕೊಟ್ಟಿತು. ಸದ್ಯ ಇವರಿಬ್ಬರ ಕೇಸ್​ ಕೆಲವು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂದೆ ಯಾವ ವಿಷಯ ಸ್ಫೋಟಗೊಳ್ಳಲಿದೆಯೋ ಎಂಬುದು ಮಾತ್ರ ಸದ್ಯದ ಮಟ್ಟಿಗೆ ಅಸ್ಪಷ್ಟ.

ಅದ್ಯಾಕೋ ನಂಬಿಕೆ ದ್ರೋಹ ಕೇಸ್​ಗೆ ಮುಕ್ತಿ ಸಿಗುವ ಯಾವ ಲಕ್ಷಣಗಳು ಕಂಡುಬಂದಂತೆ ಕಾಣುತ್ತಿಲ್ಲ. 11 ವರ್ಷಗಳ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಪ್ರೇಯಸಿ ಲಾವಣ್ಯ, ತನಗೆ ರಾಜ್​ನಿಂದ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ನನಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ ಎಂದು ಪಣತೊಟ್ಟಿರುವ ಲಾವಣ್ಯ ಒಂದೆಡೆಯಾದರೆ, ತನ್ನ ಬಹುನಿರೀಕ್ಷಿತ ಎರಡು ಸಿನಿಮಾಗಳು ಇದೊಂದು ವಿವಾದದಲ್ಲಿ ಸಿಲುಕಿ ಸೋಲು ಕಂಡಿರುವುದು ರಾಜ್​ಗೆ ಅರಗಿಸಿಕೊಳ್ಳಲಾಗದ ದುಃಖ ಮತ್ತೊಂದೆಡೆ.

ಅಸಲಿಗೆ ಯುವ ನಟನ ಪ್ರೇಮ ವಿವಾದದ ಸಮಯದಲ್ಲೇ ಎರಡು ಚಿತ್ರದ ನಿರ್ಮಾಪಕರು, ಭಾರೀ ಗೊಂದಲಗಳ ಮಧ್ಯೆಯೇ ರಾಜ್ ಅಭಿನಯದ ‘ತಿರಂಗಭದ್ರಾಸಾಮಿ’ ಮತ್ತು ‘ನಾ ಸಾಮಿ ರಂಗ’ ಚಿತ್ರಗಳನ್ನು ಬಿಡುಗಡೆಗೊಳಿಸಿದರು. ನಿರ್ಮಾಪಕರು ಅಂತಿಮವಾಗಿ ಪ್ರೇಕ್ಷಕರಿಲ್ಲದೆ ಚಿತ್ರಮಂದಿರದಿಂದ ಸಿನಿಮಾ ಎತ್ತಂಗಡಿ ಆಗುವುದನ್ನು ನೋಡಿ, ಕಡೆಗೂ ನಷ್ಟದಲ್ಲಿ ಕೈಸುಟ್ಟಿಕೊಂಡರು. ರಾಜ್ ವಿವಾದವನ್ನೇ ಅಸ್ತ್ರವನ್ನಾಗಿಸಿಕೊಳ್ಳುವ ಪ್ರಯತ್ನದಲ್ಲಿ ಮುಗ್ಗರಿಸಿದ ಚಿತ್ರ ತಯಾರಕರು, ಇದೀಗ ಹೀನಾಯ ಸೋಲನ್ನು ನೋಡಿದ್ದಾರೆ. ಸದ್ಯ ಈ ಎಲ್ಲಾ ಬೆಳವಣಿಗೆಯಿಂದ ಯುವ ನಟನ ಸಿನಿ ಭವಿಷ್ಯಕ್ಕೆ ಕೊಂಚ ಪೆಟ್ಟುಬಿದ್ದಿದ್ದು, ಮುಂದಿನ ದಿನಗಳಲ್ಲಿ ಚಿತ್ರಗಳ ಆಫರ್​ ಪಡೆಯಲು ಹೆಣಗಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆಯೇ ರಾಜ್ ನಟಿಸಿರುವ ಮತ್ತೊಂದು ಚಿತ್ರ 'ಭಲೇ ಉನಾದೆ' ಕೂಡ ರಿಲೀಸ್​ಗೆ ಸಜ್ಜಾಗಿದೆ.

ಸದ್ಯ ಎರಡು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ರಾಜ್ ತರುಣ್​ಗೆ ಮೂರನೇ ಚಿತ್ರವಾದರೂ ಕೈಹಿಡಿಯಲಿದೆಯಾ ಎಂಬ ಪ್ರಶ್ನೆ ಸದ್ಯ ಟಾಲಿವುಡ್​ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ, ಕಾಮಿಡಿ-ಡ್ರಾಮಾ ಜಾನರ್​ ಹೊಂದಿರುವ 'ಭಲೇ ಉನಾದೆ' ಸಿನಿಮಾ ಒಂದೊಳ್ಳೆ ಚಿತ್ರ ಎಂದು ಹೇಳಲಾಗಿದ್ದು, ಈ ಫಿಲಂ ಖಂಡಿತ ನಟನಿಗೆ ಗೆಲುವು ತಂದುಕೊಡಲಿದೆ ಎಂಬ ನಿರೀಕ್ಷೆಯೂ ವ್ಯಕ್ತವಾಗಿದೆ. ಜೆ. ಶಿವಸಾಯಿ ವರ್ಧನ್ ನಿರ್ದೇಶನದ ಈ ಚಿತ್ರ ಇದೇ ಸೆ.07ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿತ್ತು. ಆದ್ರೆ, ಇದೀಗ ಬಿಡುಗಡೆ ದಿನಾಂಕದಲ್ಲಿ ಬದಲಾವಣೆಯಾಗಿದ್ದು, ಚಿತ್ರವು ಸೆ.13ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅಧಿಕೃತ ಮಾಹಿತಿಯೊಂದಿಗೆ ಸ್ಪಷ್ಟಪಡಿಸಿದೆ,(ಏಜೆನ್ಸೀಸ್).