ನ್ಯೂಸ್

ಜೆಡಿಎಸ್‌ನಿಂದ ರೈತ ಸಾಂತ್ವನ ಯಾತ್ರೆ; ಎಚ್‌ಡಿಕೆ

ಬೆಂಗಳೂರು: ಬರ, ವಿದ್ಯುತ್ ಕ್ಷಾಮ ಸೇರಿ ಅನೇಕ ಗಂಭೀರ ಸಮಸ್ಯೆಗಳಿಂದ ಬಸವಳಿದಿರುವ ರೈತ ಸಮುದಾಯಕ್ಕೆ ಧೈರ್ಯ ತುಂಬುವ ಸಲುವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ ಕೈಗೊಳ್ಳಲು ಜೆಡಿಎಸ್ ನಿರ್ಧರಿಸಿದೆ.

ಜೆ.ಪಿ. ಭವನದಲ್ಲಿ ಬರ ಅಧ್ಯಯನಕ್ಕಾಗಿ ಪಕ್ಷದ ಜಿಲ್ಲಾ ಮಟ್ಟದ ತಂಡಗಳನ್ನು ರಚನೆ ಮಾಡುವ ಸಂಬಂಧ ಕರೆಯಲಾಗಿದ್ದ ಮಹತ್ವದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಮುಗಿದ ಕೂಡಲೇ ನಮ್ಮ ಪಕ್ಷದ ಎಲ್ಲ ಶಾಸಕರು, ಕೋರ್ ಕಮಿಟಿ ಸದಸ್ಯರು, ಮಾಜಿ ಸಚಿವರು, ಜಿಲ್ಲಾ ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರ ಜತೆಗೂಡಿ ಎಲ್ಲ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ ಮಾಡುತ್ತೇನೆ. ಅವರ ನೋವಿಗೆ ದನಿ ಆಗುತ್ತೇನೆ. ಅವರ ಹಕ್ಕುಗಳಿಗಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ಈ ವರ್ಷ ಮುಂಗಾರು ಕೃಷಿ ಚಟುವಟಿಕೆಗಳಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆ ಅಭಾವದಿಂದ 65 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಾಶ ಆಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿಯನ್ನೂ ನೀಡಿದೆ. ಆದರೆ, ರೈತರಿಗೆ ಸಹಾಯ ಹಸ್ತ ಚಾಚುವಲ್ಲಿ ಸೋತಿದೆ ಎಂದು ಟೀಕಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಐದು ತಿಂಗಳಿನಿಂದ ವೈಫಲ್ಯಗಳ ಕೂಪದಲ್ಲಿ ಸಿಲುಕಿದೆ. ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಎಲ್ಲದಕ್ಕೂ ಕೇಂದ್ರದ ಕಡೆಗೇ ಬೊಟ್ಟು ಮಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿದೆ. ಇದು ಸರಿಯಲ್ಲ. ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಮಾಡುವ ಬದಲು ಕೇಂದ್ರದ ಬಳಿ ಹೋಗಿ ಪರಿಹಾರ ಕೇಳಬಹುದಿತ್ತಲ್ಲವೇ ಎಂದು ಸಿಎಂ ಹೇಳಿದ್ದಾರೆ. ಸಿಎಂ ಆದವರು ಹೇಳುವ ಮಾತೇ ಇದು? ಎಂದು ತರಾಟೆ ತೆಗೆದುಕೊಂಡರು.

ಬರದಲ್ಲಿ ಸಿಎಂ ಡಾನ್ಸ್ !

214 ತಾಲೂಕುಗಳಲ್ಲಿ ಬರ ಇದೆ ಎಂದು ಸರ್ಕಾರವೇ ಕೇಂದ್ರಕ್ಕೆ ವರದಿ ಕೊಟ್ಟಿದೆ. ಎಸ್‌ಡಿಆರ್‌ಎ್ ನಲ್ಲಿ 529 ಕೋಟಿ ರೂ. ಹಣ ಇಟ್ಟಿದ್ದೇವೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಆದರೆ ಮುಖ್ಯಮಂತ್ರಿಗಳು ಎಲ್ಲೋ ಹೋಗಿ ಡಾನ್ಸ್ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಜನರು ಕಷ್ಟದಲ್ಲಿದ್ದರೆ ಇವರಿಗೆ ಸಂಭ್ರಮವೋ ಸಂಭ್ರಮ! ಎಂದು ವ್ಯಂಗ್ಯವಾಡಿದರು.

ಪ್ರಿಯಾಂಕ್ ಖರ್ಗೆಗೆ ಚಾಟಿ

ಕಲಬುರಗಿ ನಾಯಕರೊಬ್ಬರು ಬಿಜೆಪಿಗೆ ನಾಯಕರು ಜಾಬ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಎಂದಿದ್ದಾರೆ. ಅದೇನು ಎನ್ನುವುದನ್ನು ನಾವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ತೋರಿಸುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆ ತೆಗೆದುಕೊಂಡರು.

ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪುರ, ವೆಂಕಟರಾವ್ ನಾಡಗೌಡ, ಆಲ್ಕೊಡ್ ಹನುಮಂತಪ್ಪ, ಶಾಸಕರಾದ ಸಮೃದ್ಧಿ ಮಂಜುನಾಥ್, ಸ್ವರೂಪ್ ಪ್ರಕಾಶ್, ನೇಮಿರಾಜ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ ಮಾಡಿ ಸಂಕಷ್ಟದಲ್ಲಿರುವ ರೈತರನ್ನು ಭೇಟಿ ಮಾಡಿ ಧೈರ್ಯ ತುಂಬಲು ಹಾಗೂ ರಾಜ್ಯ ಸರ್ಕಾರಕ್ಕೆ ಬರ ಪರಿಹಾಋ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಸೂಕ್ತ ಸಲಹೆ ನೀಡುವ ದೃಷ್ಟಿಯಿಂದ ಪಕ್ಷದ ಮುಖಂಡರನ್ನು ಒಳಗೊಂಡ 24 ಬರ ಅಧ್ಯಯನ ತಂಡಗಳನ್ನು ಜೆಡಿಎಸ್ ರಚಿಸಿದೆ.