ಯಳಂದೂರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮತಗಳ್ಳತನ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿರುವ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಪಿ.ಮರಿಸ್ವಾಮಿ, ಎಚ್.ವಿ.ಚಂದ್ರು ಸೇರಿದಂತೆ ಅನೇಕರು ಇದ್ದರು. 
ನ್ಯೂಸ್

‘ವೋಟ್ ಚೋರ್, ಗದ್ದಿ ಛೋಡ್’ ಘೋಷಣೆ ಬಗ್ಗೆ ಜಾಗೃತಿ ಮೂಡಿಸಿ

ಯಳಂದೂರು: ಮತಗಳ್ಳತನ ಬಿಜೆಪಿ ನಡೆಸಿರುವ ಗೆಲುವಿನ ಹುನ್ನಾರವಾಗಿದೆ. ರಾಷ್ಟ್ರದೆಲ್ಲೆಡೆ ಮತಗಳ್ಳತನದಿಂದ ಅಧಿಕಾರಿ ಹಿಡಿದಿರುವ ಬಿಜೆಪಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಚುನಾವಣಾ ಆಯೋಗವೂ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೋಟ್ ಚೋರ್, ಗದ್ದಿ ಛೋಡ್ (ಮತಗಳ್ಳ, ಗದ್ದುಗೆ ಬಿಡು) ಆಂದೋಲನ ನಡೆಯುತ್ತಿದ್ದು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಕರೆ ನೀಡಿದರು.

ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ಜನಜಾಗೃತಿ ಹೋರಾಟಕ್ಕೆ ಬೆಂಬಲ ಸೂಚಿಸಿ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ ಕರ್ನಾಟಕವೂ ಸೇರಿದಂತೆ ಉತ್ತರ ಪ್ರದೇಶ, ಹರಿಯಾಣ, ಗುಜರಾತ್ ಸೇರಿದಂತೆ ಹಲವೆಡೆ ಮತಗಳ್ಳತನ ನಡೆದಿದೆ. ಈ ಬಗ್ಗೆ ನಮ್ಮ ಪಕ್ಷದ ರಾಹುಲ್‌ಗಾಂಧಿ ಸಾಕ್ಷಿ ಸಮೇತ ಇದನ್ನು ಸಾಬೀತುಪಡಿಸಿದ್ದಾರೆ. ನಂತರ ಎಚ್ಚೆತ್ತುಕೊಂಡಿರುವ ಚುನಾವಣಾ ಆಯೋಗ ಮತದಾರರ ಖಾತ್ರಿಯನ್ನು ಸರಿಪಡಿಸಿಕೊಳ್ಳಲು ಮುಂದಾಗಿರುವುದು ಇದಕ್ಕೆ ಒಟಿಪಿ ಮೂಲಕವೇ ದೃಢೀಕರಿಸುವ ಕೆಲಸವು ಸ್ವಾಗತಾರ್ಹವಾಗಿದೆ. ಕಳ್ಳತನದಿಂದ ಅಧಿಕಾರವನ್ನು ಹಿಡಿಯುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಹಾಗಾಗಿ ಮತಗಳ್ಳತನ ಮಾಡಿದವರು, ಅಧಿಕಾರದ ಗದ್ದುಗೆಯನ್ನು ಬಿಡಿ ಎಂಬ ಘೋಷ ವಾಕ್ಯ ಎಲ್ಲೆಡೆ ರಾರಾಜಿಸಬೇಕಿದೆ. ಇದಕ್ಕೆ ಬೆಂಬಲಕ್ಕಾಗಿ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು ಈ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಕೆಪಿಸಿಸಿ ಕಾರ್ಯದರ್ಶಿ ಬಸವರಾಜು, ಬ್ಲಾಕ್ ಕಾಂಗ್ರೆಸ್ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿದರು. ಜಿಲ್ಲಾ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯೋಗೇಂದ್ರ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ವಡರೆಗೆದಾಸ್, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಬಿ.ರವಿ, ಲಿಂಗರಾಜಮೂರ್ತಿ, ಮುನವ್ವರ್‌ಬೇಗ್, ಶ್ರೀಕಂಠಸ್ವಾಮಿ ಗ್ಯಾರಂಟಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯರಿಯೂರು ಪ್ರಕಾಶ್, ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಕಂದಹಳ್ಳಿ ನಂಜುಂಡಸ್ವಾಮಿ ಅಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ಕೃಷ್ಣಪುರ ದೇವರಾಜು, ಚೇತನ್, ಜಯರಾಮ್, ಮಲ್ಲು, ರಾಜಣ್ಣ, ಸೇರಿದಂತೆ ಅನೇಕರು ಇದ್ದರು.