ನ್ಯೂಸ್

ಬೆತ್ತಲೆ ಪಾರ್ಟಿ! 'ಬಟ್ಟೆ ಹಾಕಿದ್ರೆ ಎಂಟ್ರಿ ಇಲ್ಲ' 7 ಜನ ಪಾರ್ಟಿ ಆಯೋಜಕರು ಅರೆಸ್ಟ್​..Nude Party

Nude Party : ಛತ್ತೀಸ್‌ಗಢದ ರಾಯ್‌ಪುರದಲ್ಲಿ ಸೆಪ್ಟೆಂಬರ್ 21 ರಂದು ನಿಗದಿಯಾಗಿತ್ತು ಎನ್ನಲಾದ "ನಗ್ನ ಪಾರ್ಟಿ"ಯ ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಈ ಅಶ್ಲೀಲ ಪಾರ್ಟಿ ಆಯೋಜನೆ ಮಾಡಿದ್ದ ಶಂಕಿತರನ್ನು ಬಂಧಿಸಿದ್ದಾರೆ.

ರಾಯ್‌ಪುರದಲ್ಲಿ ಈ ತಿಂಗಳ ಕೊನೆಯಲ್ಲಿ ಹೆಣ್ಮಕ್ಕಳು ಗಂಡಸರು ಎಂಬ ಭೇದಭಾವವಿಲ್ಲದೆ ‘ಬೆತ್ತಲೆ ಪಾರ್ಟಿ’ ಆಯೋಜಿಸುವ ಆನ್‌ಲೈನ್ ಆಹ್ವಾನ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಅಲರ್ಟ್ ಆದ ಛತ್ತೀಸ್‌ಗಢ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

ಬಟ್ಟೆ ಹಾಕಿದ್ರೆ ನೋ ಎಂಟ್ರಿ:

ಈ ಬೆತ್ತಲೆ ಪಾರ್ಟಿಗೆ ಜಾಹೀರಾತು ನೀಡಿರುವ ಪ್ರಕಾರ, ಸಂಜೆ 4 ಗಂಟೆಯಿಂದ ತಡರಾತ್ರಿಯವರೆಗೆ ಪಾರ್ಟಿ ನಡೆಯುತ್ತದೆ. ಪ್ರವೇಶ ಶುಲ್ಕ 40,000 ರೂ.ಗಳಾಗಿದ್ದು, ಇದರಲ್ಲಿ ರಾತ್ರಿಯ ಕೊಠಡಿ ವಾಸ್ತವ್ಯವೂ ಸೇರಿದೆ.

ಪೋಸ್ಟ್‌ಗಳು ಆನ್‌ಲೈನ್‌ನಲ್ಲಿ ಹರಡುತ್ತಿದ್ದಂತೆ, ರಾಜಕೀಯ ವಾಗ್ವಾದ ಭುಗಿಲೆದ್ದಿತು ಮತ್ತು ರಾಯ್‌ಪುರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಈ ಬಗ್ಗೆ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ಟೀಕಿಸುವ ಮೂಲಕ ವಾಗ್ದಾಳಿ ಕೂಡ ನಡೆಸಿತ್ತು.

ಹೈಪರ್ ಕ್ಲಬ್ ವ್ಯವಸ್ಥಾಪಕ ಜೇಮ್ಸ್ ಬ್ಯಾಕ್, ಸಂತೋಷ್ ಜೆವಾನಿ, ಅಜಯ್ ಮಹಾಪಾತ್ರ, ಎಸ್.ಎಸ್. ಗುಪ್ತಾ, ಟಿನು ಸಿಂಗ್ ಮತ್ತು ದೇವೇಂದ್ರ, ದೀಪಕ್ ಸಿಂಗ್ ಸೇರಿದಂತೆ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ, ಇವರೆಲ್ಲರೂ ಗುರುತಿಸಲಾಗದ ಸಂಘಟನಾ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾಗಿದೆ.

ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಛತ್ತೀಸ್‌ಗಢ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ಕಿರಣ್‌ಮಯಿ ನಾಯಕ್ ಅವರು ರಾಯ್‌ಪುರ ಎಸ್‌ಪಿಗೆ ಪತ್ರ ಬರೆದು 48 ಗಂಟೆಗಳ ಒಳಗೆ ಪೂರ್ಣ ವರದಿ ನೀಡುವಂತೆ ಕೋರಿದ್ದಾರೆ ಮತ್ತು ಆಯೋಜಕರು, ಪ್ರಾಯೋಜಕರು ಮತ್ತು ಆನ್‌ಲೈನ್‌ನಲ್ಲಿ ಆಹ್ವಾನ ಪತ್ರಿಕೆಗಳನ್ನು ಪ್ರಸಾರ ಮಾಡುವವರ ವಿರುದ್ಧ ತನಿಖೆ ನಡೆಸುವಂತೆ ಎಸ್‌ಪಿ ಮತ್ತು ಸೈಬರ್ ಸೆಲ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.