ಸಾಗರದ ಹವ್ಯಕ ಅಭಿವೃದ್ಧಿ ಪ್ರತಿಷ್ಠಾನದ ಮಹಿಳಾ ವಸತಿ ನಿಲಯದಲ್ಲಿ ಏರ್ಪಡಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ತೇಜಸ್ವಿನಿ ಅನಂತಕುಮಾರ್, ಎಂ.ಜಿ.ಪ್ರಕಾಶ್ ಭಟ್, ಕೆ.ಎಸ್.ಸುಬ್ರಾವ್, ಅಶ್ವಿನಿಕುಮಾರ್ ಇತರರಿದ್ದರು.  
ನ್ಯೂಸ್

ಮಳೆಕಾಡು ರಕ್ಷಣೆ ಎಲ್ಲರ ಹೊಣೆ

ಶಿವಕುಮಾರ ಎಸ್.ಪಿ.

ಸಾಗರ: ಪಶ್ಚಿಮಘಟ್ಟ ಪ್ರದೇಶದಲ್ಲಿ ಪ್ರವಾಸೋದ್ಯಮ ಎನ್ನುವುದು ಮೋಜು ಮಸ್ತಿಯಾಗಿದೆ. ಆದರೆ ಮಳೆಕಾಡುಗಳನ್ನು ಕಳೆದುಕೊಳ್ಳುತ್ತಿರುವುದು ಯಾರ ಗಮನಕ್ಕೂ ಬಂದಂತಿಲ್ಲ ಎಂದು ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿದರು

ಸಾಗರದ ಹವ್ಯಕ ಅಭಿವೃದ್ಧಿ ಪ್ರತಿಷ್ಠಾನದ ಮಹಿಳಾ ವಸತಿ ನಿಲಯದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಹೆಸರಿನಲ್ಲಿ ಬರುವವರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ಇದರಿಂದ ಇಂಗಾಲ ಇಂಗಾಲ ಹೆಚ್ಚು ಉತ್ಪತ್ತಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಶ್ಚಿಮಘಟ್ಟ ಪರಿಸರ ಜೀವವೈವಿಧ್ಯದ ದೊಡ್ಡ ಬ್ಯಾಂಕ್ ಇದ್ದಂತೆ. ಇದನ್ನು ಅರಿಯಲು, ಅರ್ಥ ಮಾಡಿಕೊಳ್ಳುವ ಪ್ರವಾಸೋದ್ಯಮದ ಆಯಾಮ ಸೃಷ್ಟಿಯಾಗಬೇಕು. ನಾವು ಸೃಷ್ಟಿ ಮಾಡುತ್ತಿರುವ ಇಂಗಾಲವನ್ನು ಹೀರುವ ಸಾಮರ್ಥ್ಯ ಇರುವುದು ಮರಗಿಡಗಳಿಗೆ ಮಾತ್ರ. ನಾವು ಸಸಿ ನೆಟ್ಟು ಪೋಷಣೆ ಮಾಡುವ ಕಡೆ ಗಮನ ಹರಿಸಬೇಕು ಎಂದರು.

ಪ್ರತಿ ಭಾನುವಾರ ಅದಮ್ಯ ಚೇತನ ಟ್ರಸ್ಟ್ ಗಿಡ ನೆಡುವ ಆಂದೋಲನ ನಡೆಸುತ್ತಿದೆ. ಭಾಷಣಗಳಿಂದ ಪರಿಸರ ಉಳಿಸಲು ಸಾಧ್ಯವಿಲ್ಲ. ಸಣ್ಣಸಣ್ಣ ಬದಲಾವಣೆಗಳಿಂದ ಉನ್ನತವಾದುದ್ದನ್ನು ಸಾಧಿಸಬಹುದು. ಪರಿಸರ ಉಳಿಸಿ ಬೆಳೆಸುವ ಬಗ್ಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ನಿಮ್ಮ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಅಗತ್ಯವಿದೆ ಎಂದು ತಿಳಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಎಂ.ಜಿ.ಪ್ರಕಾಶ್ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಕೆ.ಎಸ್.ಸುಬ್ರಾವ್, ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಜೋಷಿ ಫೌಂಡೇಶನ್‌ನ ಅಬಸೆ ದಿನೇಶಕುಮಾರ್ ಎನ್. ಜೋಷಿ, ಉಮೇಶ್ ಎಚ್.ಎನ್., ಪಿ.ಎನ್.ನಾಗರಾಜ್, ಲಕ್ಷಿನಾರಾಯಣ, ಅರುಣ್ ಕುಂಟಗೋಡು, ವೆಂಕಟೇಶ್ ಕವಲಕೋಡು ಇತರರಿದ್ದರು.