ಗಾಳಿಯ ಆರ್ಭಟಕ್ಕೆ ವಿದ್ಯುತ್ ಲೈನ್‌ಗಳ ಮೇಲೆ ಮರಗಳು ಬಿದ್ದ ಪರಿಣಾಮ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಾತ್ರಿಯಿಡೀ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. 
ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುಡುಗು-ಮಿಂಚಿನ ಅಬ್ಬರದೊಂದಿಗೆ ಮಳೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಸುಡುತ್ತಿದ್ದ ಬಿಸಿಲಿಗೆ ಈ ಮಳೆ ತಂಪು ನೀಡಿದೆಯಾದರೂ, ಹಲವೆಡೆ ಜನಜೀವನ ವ್ಯಸ್ತಗೊಂಡಿದೆ. ವಿಶೇಷವಾಗಿ ಗಾಳಿಯ ಆರ್ಭಟಕ್ಕೆ ವಿದ್ಯುತ್ ಲೈನ್‌ಗಳ ಮೇಲೆ ಮರಗಳು ಬಿದ್ದ ಪರಿಣಾಮ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಾತ್ರಿಯಿಡೀ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ತಾಲೂಕುವಾರು ಮಳೆ ವಿವರ

ಮಂಗಳೂರು ನಗರ ಪ್ರದೇಶ ಹಾಗೂ ಸುತ್ತಮುತ್ತಲಿನ ಉಳ್ಳಾಲ, ಸುರತ್ಕಲ್ ಭಾಗಗಳಲ್ಲಿ ರಾತ್ರಿ 8 ಗಂಟೆಯ ನಂತರ ಗುಡುಗು ಸಹಿತ ಮಳೆ ಆರಂಭವಾಯಿತು. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಬಂಟ್ವಾಳ ಮತ್ತು ಬೆಳ್ತಂಗಡಿ ಭಾಗಗಳಲ್ಲಿ ಬಿರುಗಾಳಿಯ ತೀವ್ರತೆ ಹೆಚ್ಚಾಗಿತ್ತು. ಬೆಳ್ತಂಗಡಿಯ ಚಾರ್ಮಾಡಿ ಘಾಟ್ ಅಂಚಿನ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾದ ವರದಿಯಾಗಿದೆ. ಬಂಟ್ವಾಳದ ಬಿ.ಸಿ ರೋಡ್ ಹಾಗೂ ಪಾಣೆಮಂಗಳೂರು ಪರಿಸರದಲ್ಲಿ ಬಿರುಸಿನ ಮಳೆಯಾಗಿದೆ. ಕಡಬ ತಾಲೂಕಿನ ಕೆಲವೆಡೆ ಗುಡುಗಿನ ಆರ್ಭಟ ಜೋರಾಗಿತ್ತು. ಕೃಷಿ ತೋಟಗಳಿಗೆ ಈ ಮಳೆ ಪೂರಕವಾಗಿದ್ದರೂ, ಹಠಾತ್ ಗಾಳಿಯಿಂದ ಅಡಿಕೆ ಮರಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಸುಳ್ಯ ತಾಲೂಕಿನಲ್ಲಿ ರಾತ್ರಿ ತಡವಾಗಿ ಮಳೆ ಆರಂಭವಾಗಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

*ವಿದ್ಯುತ್ ವ್ಯತ್ಯಯ

ಮಂಗಳವಾರ ರಾತ್ರಿ ಬೀಸಿದ ಗಾಳಿಗೆ ಜಿಲ್ಲೆಯ ಹಲವೆಡೆ ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಮೆಸ್ಕಾಂ ಇಲಾಖೆಯು ಜಿಲ್ಲೆಯ ಬಹುತೇಕ ಫೀಡರ್‌ಗಳ ಸಂಪರ್ಕ ಕಡಿತಗೊಳಿಸಿತ್ತು. ಮಂಗಳೂರು ನಗರದ ಕೆಲವು ಬಡಾವಣೆಗಳು ಸೇರಿದಂತೆ ಗ್ರಾಮೀಣ ಭಾಗಗಳಾದ ಬಂಟ್ವಾಳ, ವಿಟ್ಲ ಹಾಗೂ ಬೆಳ್ತಂಗಡಿಯಲ್ಲಿ ಇಡೀ ರಾತ್ರಿ ವಿದ್ಯುತ್ ಇಲ್ಲದೆ ಜನರು ಕತ್ತಲಲ್ಲಿ ಕಳೆಯುವಂತಾಯಿತು. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ ಅಥವಾ ದೊಡ್ಡ ಮಟ್ಟದ ಆಸ್ತಿ ಪಾಸ್ತಿ ಹಾನಿ ಸಂಭವಿಸಿಲ್ಲ. ಕೆಲವು ಕಡೆಗಳಲ್ಲಿ ಹಳೆಯ ಮನೆಗಳ ಮೇಲೆ ಮರದ ಕೊಂಬೆಗಳು ಬಿದ್ದು ಮೇಲ್ಛಾವಣಿಗೆ ಹಾನಿಯಾದ ವರದಿಗಳು ಬಂದಿವೆ. ರಸ್ತೆ ಬದಿಯ ಜಾಹೀರಾತು ಫಲಕಗಳು ಗಾಳಿಗೆ ಹಾರಿ ಹೋಗಿವೆ. ಇಂದಿನಿಂದ ಹಾನಿಗೊಳಗಾದ ವಿದ್ಯುತ್ ತಂತಿಗಳ ದುರಸ್ತಿ ಕಾರ್ಯವನ್ನು ಮೆಸ್ಕಾಂ ಸಿಬ್ಬಂದಿ ಸಮರೋಪಾದಿಯಲ್ಲಿ ಕೈಗೊಂಡಿದ್ದು, ಸಂಜೆ ವೇಳೆಗೆ ಎಲ್ಲಾ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಸುಗಮಗೊಳ್ಳುವ ನಿರೀಕ್ಷೆಯಿದೆ.

*16ರವರೆಗೆ ಕರಾವಳಿಯಲ್ಲಿ ಗುಡುಗು ಸಹಿತ ಮಳೆ

ಜಿಲ್ಲೆಯಲ್ಲಿ ಸರಾಸರಿ 45ಮಿಮಿ ವರೆಗೆ ಮಳೆಯಾದ ದಾಖಲೆಯಾಗಿದೆ. ಮಂಗಳೂರು ನಗರದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದ್ದರೆ, ಸುಳ್ಯ ಭಾಗದಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದೆ. ಬಂಗಾಳಕೊಲ್ಲಿಯ ಹವಾಮಾನ ಬದಲಾವಣೆಯಿಂದಾಗಿ ಮೇ 16ರವರೆಗೆ ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಸಿಡಿಲು ಬಡಿಯುವ ಸಾಧ್ಯತೆ ಹೆಚ್ಚಿರುವುದರಿಂದ ಮಳೆ ಬರುವಾಗ ಜನರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹಾಗೂ ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಮುಂಗಾರು ಪೂರ್ವ ಮಳೆ ಕೊರತೆ!
ಮುಂಗಾರು ಪೂರ್ವ ವಾಡಿಕೆಯ ಮಳೆಯಲ್ಲಿ ಮಲೆನಾಡು ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಪೂರ್ವ ಮಳೆ ಕೊರತೆ ಕಂಡು ಬಂದಿದೆ. ವಾಡಿಕೆಯ ಮಳೆಯ ಪ್ರಕಾರ ಮಲೆನಾಡಿನಲ್ಲಿ ಮಾರ್ಚ್ 1ರಿಂದ ಮೇ 12ರವರೆಗೆ 95 ಮಿ.ಮೀ. ಮಳೆಯಾಗಬೇಕು. ಆದರೆ ಈ ಅವಧಿಯಲ್ಲಿ 75 ಮಿ.ಮೀ. ಮಾತ್ರವೇ ಮಳೆಯಾಗಿ ಶೇ. 21ರಷ್ಟು ಮಳೆ ಕೊರತೆಯಾಗಿದೆ. ಉಡುಪಿ ದ.ಕ. ಸೇರಿದಂತೆ ಕರಾವಳಿಯಲ್ಲಿ ವಾಡಿಕೆ ಮಳೆ ಪ್ರಮಾಣ 61 ಮಿ.ಮೀ. ಆಗಿದ್ದು, ಈವರೆಗೆ ಸುರಿದ ಮಳೆ 58 ಮಿ.ಮೀ. ಹಾಗಾಗಿ ಶೇ. 5 ರಷ್ಟು ಮುಂಗಾರು ಪೂರ್ವ ಮಳೆ ಕೊರತೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿಅಂಶಗಳಿಂದ ತಿಳಿದು ಬಂದಿದೆ.