ನ್ಯೂಸ್

ಮಲೆನಾಡು ಕರಾವಳಿಯಲ್ಲಿ ಬಿರುಸಿನ ಮಳೆ, ಜನಜೀವನ ಅಸ್ತವ್ಯಸ್ತ

ಬೆಂಗಳೂರು: : ರಾಜ್ಯದ ವರುಣನ ಆರ್ಭಟ ಮುಂದುವರೆದಿದ್ದು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳು ಸೇರಿದಂತೆ ವಿವಿಧೆಡೆ ಗುರುವಾರ ಬಿರುಸಿನ ಮಳೆಯಾಗಿದೆ.
ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕುಂಭದ್ರೋಣ ಮಳೆ ಅಬ್ಬರಿಸಿದ್ದು, ಜನಜೀವನ ನಲುಗಿದೆ. ಕೆಲವೆಡೆ ಬುಧವಾರ ರಾತ್ರಿಯಿಂದ ಗುರುವಾರ ಹಗಲಿಡೀ ಸುರಿದ ಮಳೆಯಿಂದ ನದಿಗಳು ತುಂಬಿ ಹರಿದಿದ್ದು ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿರಲಿದ್ದು ಇಂದು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅಲ್ಲದೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೊಟ್ಟಿಗೆಹಾರದಲ್ಲಿ ಬಿರುಗಾಳಿಯೊಂದಿಗೆ ಮಳೆ ಆರ್ಭಟಿಸುತ್ತಿದ್ದು, ಮನೆಯಿಂದ ಹೊರಗೆ ಬರಲೂ ಜನ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ

ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಬಾಳೆಹೊನ್ನೂರಿನಲ್ಲೂ ಇದೇ ಸ್ಥಿತಿ ಇದೆ. ಹಲವೆಡೆ ಮನೆಗಳು ಕುಸಿದಿದ್ದು, ಮರ ಮತ್ತು ವಿದ್ಯುತ್ ಕಂಬಗಳು ಉರುಳಿವೆ.
ತುಂಗಾ, ಭದ್ರಾ, ನೇತ್ರಾವತಿ, ವೇದಾವತಿ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಲ್ಲಲ್ಲಿ ಸಣ್ಣದಾಗಿ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಕೆಲವೆಡೆ ಮಳೆಯ ನಡುವೆ ಭತ್ತದ ನಾಟಿ ಕಾರ್ಯ ಆರಂಭವಾಗಿದೆ.

ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಮಡಿಕೇರಿ ತಾಲ್ಲೂಕಿನ ಕರ್ತೋಜಿ ಎಂಬಲ್ಲಿ ಗುಡ್ಡ ಕುಸಿಯುವ ಹಂತ ತಲುಪಿದೆ. ಹೀಗಾಗಿ, ಇಲ್ಲಿ ಎಲ್ಲ ಬಗೆಯ ವಾಹನ ಸಂಚಾರವನ್ನು ಜುಲೈ 22ರವರೆಗೆ ನಿತ್ಯ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಿಸಲಾಗಿದೆ.

ಕೊಡಗು ಜಿಲ್ಲೆಯ ಕರಡಿಗೋಡು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ ಎಲ್ಲ ನದಿಗಳು ಅಪಾಯದಂಚು ತಲುಪಿವೆ.