ನ್ಯೂಸ್

500 ರೂ. ಡ್ರಾ ಮಾಡಲು ಹೋದ್ರೆ ಸಿಗುತ್ತಿದೆ 2500 ರೂ.! ಎಟಿಎಂನಲ್ಲಿ ಹಣದ ಮಳೆ, ಮುಗಿಬಿದ್ದ ಜನರು

ಹೈದರಾಬಾದ್​: ನಗರದ ಹರಿಬೌಲಿಯಲ್ಲಿರುವ ಎಚ್​ಡಿಎಫ್​ಸಿ ಎಟಿಎಂ ಕೇಂದ್ರವು ವಿಚಿತ್ರ ವಿದ್ಯಾಮಾನವೊಂದಕ್ಕೆ ಸಾಕ್ಷಿಯಾಗಿದೆ. ಈ ಎಟಿಎಂನಲ್ಲಿ 500 ಡ್ರಾ ಮಾಡಲು ಹೋದರೆ 2500 ರೂ. ವಿತ್​ಡ್ರಾ ಆಗುತ್ತಿದ್ದು, ಜನರು ಡೆಬಿಟ್​ ಕಾರ್ಡ್​ ಹಿಡಿದು ಎಟಿಎಂ ಯಂತ್ರದ ಮುಂದೆ ಮುಗಿ ಬಿದ್ದಿದ್ದಾರೆ.

ಹರಿಬೌಲಿಯ ಎಟಿಎಂನಲ್ಲಿ ವ್ಯಕ್ತಿಯೊಬ್ಬ 500 ರೂಪಾಯಿ ಡ್ರಾ ಮಾಡಲು ಯತ್ನಿಸಿದ. ಒಮ್ಮೆಲೇ ಆತನಿಗೆ 2500 ರೂ. ಡ್ರಾ ಆಗಿದೆ. ಈ ಬಗ್ಗೆ ವ್ಯಕ್ತಿ ತನ್ನ ಸ್ನೇಹಿತರಿಗೆ ತಿಳಿಸಿದ್ದರಿಂದ ಅವರು ಕೂಡ ಹಣ ಡ್ರಾ ಮಾಡಿದ್ದಾರೆ. ಎಟಿಎಂನಲ್ಲಿ ಹಣದ ಮಳೆ ಸುರಿಯುತ್ತಿರುವ ವಿಚಾರ ಸ್ಥಳೀಯರಿಗೂ ಹಬ್ಬಿದೆ. ಇದರ ಬೆನ್ನಲ್ಲೇ ಜನರೆಲ್ಲರೂ ಎಟಿಎಂ ಕಾರ್ಡ್‌ಗಳನ್ನು ಹಿಡಿದುಕೊಂಡು ಎಟಿಎಂ ಕೇಂದ್ರಕ್ಕೆ ಸಾಲು ಸಾಲಾಗಿ ಬಂದು ಹಣ ಡ್ರಾ ಮಾಡಲು ಮುಗಿಬಿದ್ದರು.

ಆದರೆ, ಎಟಿಎಂನಲ್ಲಿ ತಾಂತ್ರಿಕ ದೋಷದಿಂದ ಹೀಗಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಈ ವಿಷಯ ತಿಳಿದ ಅಧಿಕಾರಿಗಳು ಎಟಿಎಂ ಕೇಂದ್ರಕ್ಕೆ ದೌಡಾಯಿಸಿದರು. ಕೂಡಲೇ ಎಟಿಎಂ ಕೇಂದ್ರವನ್ನು ಮುಚ್ಚಲಾಯಿತು. ಇದರಿಂದ ಅಪಾರ ನಿರೀಕ್ಷೆಯೊಂದಿಗೆ ಅಲ್ಲಿಗೆ ಬಂದಿದ್ದ ಹಲವರು ಜನರು ನಿರಾಸೆಯಿಂದ ಹಿಂತಿರುಗಿದರು. ಆಗಲೇ ಡ್ರಾ ಮಾಡಿದವರು ಫುಲ್ ದಿಲ್ ಖುಷ್ ಆಗಿ ಜೇಬು ತುಂಬಿಸಿಕೊಂಡು ಅಲ್ಲಿಂದ ಜಾರಿಕೊಂಡರು. (ಏಜೆನ್ಸೀಸ್​)