ನ್ಯೂಸ್

ಮಳೆಗೆ ಜನಜೀವನ ತತ್ತರ; ಲಿಂಗದಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆ

Haveri - Kariyappa Aralikatti

ರಾಣೆಬೆನ್ನೂರ: ತಾಲೂಕು ಸೇರಿ ಜಿಲ್ಲಾದ್ಯಂತ ಭಾನುವಾರವೂ ಮಳೆ ಎಡಬಿಡದೆ ಸುರಿದಿದ್ದು, ಜಿಲ್ಲೆಯ ಹಲವೆಡೆ ಮನೆ ಗೋಡೆ ಕುಸಿದು ಬಿದ್ದಿವೆ. ರಾಣೆಬೆನ್ನೂರ ಸೇರಿ ಅಲ್ಲಲ್ಲಿ ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ಅಲ್ಲದೆ ನದಿ ನೀರು ಜಮೀನು, ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.
ತಾಲೂಕಿನ ಲಿಂಗದಹಳ್ಳಿ ಬಳಿಯಿರುವ ಕುಮುದ್ವತಿ ನದಿಯ ಸೇತುವೆ ಸಂಪೂರ್ಣ ಮುಳಗಿ ಹೋಗಿದ್ದು, ಈ ಗ್ರಾಮದಿಂದ ಸಂಪರ್ಕ ಕಲ್ಪಿಸುತ್ತಿದ್ದ ಅಂತರವಳ್ಳಿ, ಮಣಕೂರ, ನಂದಿಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಕುಮುದ್ವತಿ ನದಿಯ ಸೇತುವೆ ಚಿಕ್ಕದಾಗಿರುವ ಕಾರಣ ಪ್ರತಿ ವರ್ಷವೂ ಸೇತುವೆ ಮುಳುಗಡೆಯಾಗುತ್ತಿದೆ. ಇದರಿಂದ ಸುತ್ತಲಿನ ಗ್ರಾಮಸ್ಥರಿಗೆ ಓಡಾಡಲು ತೀವ್ರ ತೊಂದರೆ ಎದುರಿಸುವಂತಾಗಿದೆ. ಆದ್ದರಿಂದ ಸ್ಥಳಿಯ ಶಾಸಕರು, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಮೇಲ್ಮಟ್ಟದಲ್ಲಿ ಹೊಸ ಸೇತುವೆ ನಿಮಿರ್ಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತರಕಾರಿ, ಬೆಳೆ ಹಾನಿ…
ಲಿಂಗದಹಳ್ಳಿ, ಕುಪ್ಪೇಲೂರ, ಮುಷ್ಟೂರು ಸೇರಿ ಸುತ್ತಲಿನ ರೈತರು ಕುಮುದ್ವತಿ ನದಿ ನೀರು ನಂಬಿಕೊಂಡು ತರಕಾರಿ, ತೋಟಗಾರಿಕೆ ಬೆಳೆ ಬೆಳೆದಿದ್ದರು. ಆದರೀಗ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದ್ದು, ನದಿಪಾತ್ರದ ನೂರಾರು ಎಕರೆಯಷ್ಟು ಬೆಳೆ ನೀರು ಪಾಲಾಗಿದೆ. ಬಾಳೆ, ಅಡಕೆ, ಟೊಮ್ಯಾಟೊ, ಕೋತಂಬರಿ, ಬೆಳ್ಳುಳ್ಳಿ ಹಾಗೂ ಸೇವಂತಿ ಬೆಳೆದಿದ್ದ ಜಮೀನುಗಳು ಹಾಗೂ ತೋಟದಲ್ಲಿ ಮೊಣಕಾಲೊರೆಗೂ ನೀರು ನಿಂತಿದ್ದು, ಬೆಳೆಗಳು ಸಂಪೂರ್ಣ ಕೊಳೆತು ಹಾಳಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಸಾವಿರಾರು ರೂ. ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಆದರೆ, ಕುಮುದ್ವತಿ ನದಿ ನೀರಿನಲ್ಲಿ ಸಂಪೂರ್ಣ ಬೆಳೆ ಕೊಚ್ಚಿ ಹೋಗಿದೆ. ಆದ್ದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಹಾನಿಯಾದ ಬೆಳೆಗಳಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ಬೆಳೆಹಾನಿಯಾದ ರೈತರು ಆಗ್ರಹಿಸಿದ್ದಾರೆ.