ಬೆಂಗಳೂರು: (Yellow Alert' issued for tomorrow) ಈಶಾನ್ಯ ಮಾನ್ಸೂನ್ ಚುರುಕು ಬೆನ್ನಲ್ಲೇ ರಾಜಧಾನಿಯ ಹಲವು ಬಡಾವಣೆಗಳಲ್ಲಿ ಶನಿವಾರವೂ ಗುಡುಗು ಸಹಿತ ವರ್ಷಧಾರೆಯಾಯಿತು.
ಪರಿಣಾಮ ಕೆಲವೆಡೆ ರಸ್ತೆ, ಮೇಲ್ಸೇತುವೆಗಳು, ಜಂಕ್ಷನ್ಗಳು ಮತ್ತು ಅಂಡರ್ಪಾಸ್ಗಳಲ್ಲಿ ನೀರು ನಿಂತಿತ್ತು. ನಿರಂತರ ಮಳೆಯಿಂದ ನಗರದಲ್ಲಿ ವಾಡಿಕೆಕ್ಕಿಂತ ಹೆಚ್ಚಳವಾಗಿದ್ದ ಉಷ್ಣಾಂಶ ಇಳಿಮುಖವಾಗಿ ತಂಪಾದ ವಾತಾವರಣ ನಿರ್ಮಾಣವಾಯಿತು.
ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್. ಮಾರುಕಟ್ಟೆ, ಶಾಂತಿನಗರ, ಜಯನಗರ, ಜೆ.ಪಿ. ನಗರ, ಜೆ.ಸಿ. ನಗರ, ಬನಶಂಕರಿ, ವಿಜಯನಗರ, ನಂದಿನಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ಸುಬ್ರಹ್ಮಣ್ಯನಗರ, ನಾಗರಬಾವಿ, ಮೂಡಲಪಾಳ್ಯ, ಗಿರಿನಗರ, ಬಸವನಗುಡಿ, ಶೇಷಾದ್ರಿಪುರ ಸೇರಿ ಬಹುತೇಕ ಬಡಾವಣೆಗಳಲ್ಲಿ ವರ್ಷಧಾರೆಯಾಯಿತು.
ನೀರಿನ ರಭಸಕ್ಕೆ ಕಾರು, ಬೈಕ್ ಸವಾರರು ತೊಂದರೆ ಅನುಭವಿಸಿದರು. ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ವಾಹನ ಚಲಾಯಿಸಲು ಕೆಲಕಾಲ ಪರದಾಡಿದರು. ಅಂಡರ್ಪಾಸ್, ಜಂಕ್ಷನ್ಗಳಲ್ಲಿ ನೀರು ನಿಂತಿತ್ತು. ರಸ್ತೆ ಬದಿಗಳಲ್ಲಿ ಬೈಕ್ ನಿಲ್ಲಿಸಿ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟು ಮುಂಭಾಗ ಆಶ್ರಯ ಪಡೆದರು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಕಾಮಗಾರಿ ನಡೆಯುತ್ತಿದ್ದ ಸ್ಥಳಗಳಲ್ಲಿ ನೀರು ನಿಂತಿರುವುದು ಕಂಡುಬಂತು.
ಶನಿವಾರ ಮುಂಜಾನೆಯಿಂದ ಮಳೆ ಹಿನ್ನೆಲೆಯಲ್ಲಿ ನಗರದ ಹಲವಡೆ ಸಂಚಾರ ಸಿಕ್ಕು ಉಂಟಾಯಿತು. ಬೆಳಗ್ಗೆಯೇ ಮೆಜೆಸ್ಟಿಕ್ ಸುತ್ತಮುತ್ತ ವಾಹನ ದಟ್ಟಣೆ ಉಂಟಾಯಿತು. ಕಂಟೋನ್ಮೆಂಟ್ ಸುತ್ತಮುತ್ತ, ಕೆ.ಆರ್. ಮಾರುಕಟ್ಟೆ, ಕೆ.ಆರ್. ಸರ್ಕಲ್, ಮೈಸೂರು ರಸ್ತೆ, ತುಮಕೂರು ರಸ್ತೆ, ಏರ್ಪೋರ್ಟ್ ರಸ್ತೆ, ವೈಟ್ ಫೀಲ್ಡ್, ಹೊಸೂರು ರಸ್ತೆ, ಕೆ.ಆರ್.ಪುರ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಜಯನಗರದ 4ನೇ ಹಂತದಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಬೈಕ್ಗಳಿಗೆ ನೀರು ನುಗ್ಗಿತ್ತು.
ಜೋರು ಮಳೆ:
ಸಿಲಿಕಾನ್ ಸಿಟಿಯಲ್ಲಿ ಭಾನುವಾರ ಜೋರು ಮಳೆಯಾಗುವ ಸಂಭವ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕೆಲ ಪ್ರದೇಶಗಳಲ್ಲಿ ಗಂಟೆಗೆ 40 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ.ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29.6 ಮತ್ತು 20 ಡಿ. ಸೆ. ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.