ಬೆಂಗಳೂರು: (Cyclone Arnab) ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ಸೋಮವಾರ ರೂಪುಗೊಂಡಿರುವ ‘ಅರ್ನಾಬ್‘ ಚಂಡಮಾರುತ ಪರಿಣಾಮದಿಂದ ರಾಜ್ಯದಲ್ಲಿ ಮುಂದಿನ 2 ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ಕೊಟ್ಟಿದೆ.
ಬೆಂ.ದಕ್ಷಿಣ, ಚಾಮರಾಜನಗರದಲ್ಲಿ ಮುಂದಿನ 2 ದಿನ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಮೈಸೂರಿನಲ್ಲಿ ಅ.26ರಂದು ರಭಸವಾಗಿ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಇರಲಿದೆ.
ಚಂಡಮಾರುತ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ಒರಿಸ್ಸಾ ಕರಾವಳಿಗೆ ಮಳೆ, ಬಿರುಗಾಳಿ ಮುನ್ನೆಚ್ಚರಿಕೆ ನೀಡಲಾಗಿದೆ. ಬಂಗಾಳ ಕೊಲ್ಲಿಯ ಪೂರ್ವ-ಮಧ್ಯ ಮತ್ತು ಅದಕ್ಕೆ ಹತ್ತಿರದ ಆಗ್ನೇಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ತೀವ್ರಗೊಂಡು ಅ.26ರ ಮುಂಜಾನೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ.
ಅ.27ರ ಬೆಳಗ್ಗೆ ‘ತೀವ್ರ ಚಂಡಮಾರುತವಾಗಿ’ ಮತ್ತು ಅ.28ರ ಮುಂಜಾನೆ ವೇಳೆಗೆ ’ಅತಿ ತೀವ್ರ ಚಂಡಮಾರುತವಾಗಿ’ ಆಂಧ್ರಪ್ರದೇಶ ಕರಾವಳಿಗೆ ತಲುಪಲಿದೆ.ಅ.28ರ ಮಧ್ಯಾಹ್ನದೊಳಗೆ ಬಾಪಟ್ಲಾ, ವಿಶಾಖಪಟ್ಟಣ ನಡುವೆ ಆಂಧ್ರಪ್ರದೇಶ ಹಾಗೂ ಯಾನಂ ಕರಾವಳಿಯಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಈ ವೇಳೆ ಗಂಟೆಗೆ 140 ಕಿ.ಮೀ ವೇಗದಲ್ಲಿ ತೀವ್ರ ಗಾಳಿ ಬೀಸುವ ಸಾಧ್ಯತೆ ಇದೆ.
ತೆಲಂಗಾಣ, ದಕ್ಷಿಣ ಛತ್ತೀಸ್ಗಢ, ಜಾರ್ಖಂಡ್, ಬಿಹಾರ್, ಪಶ್ಚಿಮ ಬಂಗಾಳ, ಸಿಕ್ಕಿಂ, ವಿದರ್ಭ, ಪೂರ್ವ ಮಧ್ಯಪ್ರದೇಶ ಮತ್ತು ಪೂರ್ವ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಅ.28ರಿಂದ 30ರವರೆಗೆ ಬಾರೀ ಮಳೆಯಾಗುವ ಮುನ್ಸೂಚನೆ ಇದೆ. ಅಂಡಮಾನ್ ದ್ವೀಪ, ಬಂಗಾಳ ಕೊಲ್ಲಿಯ ವಿವಿಧ ಭಾಗಗಳು ಹಾಗೂ ಆಂಧ್ರ-ಒಡಿಶಾ ಕರಾವಳಿ ಪ್ರದೇಶಗಳಲ್ಲಿ ಸಮುದ್ರವು ಪ್ರಕ್ಷುಬ್ಧವಾಗಿರಲಿದೆ. ಹೀಗಾಗಿ,ಅ.28ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಅರ್ನಾಬ್ ಸೈಕ್ಲೋನ್ನಿಂದ ರಾಜ್ಯಕ್ಕೆ ಅಷ್ಟೇನೂ ಪರಿಣಾಮ ಇರುವುದಿಲ್ಲ. ಕೆಲವೆಡೆ ಮಾತ್ರ ಮಳೆ ಸುರಿಯಲಿದೆ. ಉತ್ತರ ಕರ್ನಾಟಕ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
- ಸಿ.ಎಸ್.ಪಾಟೀಲ್, ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ.