ನ್ಯೂಸ್

ಮುಂದಿನ 48 ಗಂಟೆ ರಾಜ್ಯದಲ್ಲಿ ಭಾರಿ ಮಳೆ, ನಾಳೆ 10 ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮುಂದಿನ 48 ಗಂಟೆ ಭಾರಿ ಮಳೆಯಾಗಲಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಶುಕ್ರವಾರವೂ ಮಳೆ ಅಬ್ಬರ ಹೆಚ್ಚಾಗಿತ್ತು.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಜ.9ರಿಂದ ಮುಂದಿನ ಎರಡು ದಿನ ಹಾಗೂ ಚಿತ್ರದುರ್ಗ, ಕೋಲಾರ ಮತ್ತು ತುಮಕೂರಿನಲ್ಲಿ ಮುಂದಿನ 24 ಗಂಟೆ ಭಾರಿ ಮಳೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ 64.5 ಮಿ.ಮೀ.ನಿಂದ 115.5 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. 

ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ ಮತ್ತು ಕೊಪ್ಪಳದಲ್ಲಿ ಮುಂದಿನ 48 ಗಂಟೆ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಕೆಲ ಭಾಗಗಳಲ್ಲಿ ಅಲ್ಲಲ್ಲಿ ಚುದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ಮಾಹಿತಿ ನೀಡಿದರು.