ಪಿರಿಯಾಪಟ್ಟಣ ತಾಲೂಕಿನ ಮರಡಿಯೂರು ಬಳಿ ಭಾರಿ ಮಳೆಯಿಂದಾಗಿ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವುದು. 
ನ್ಯೂಸ್

ಪಿರಿಯಾಪಟ್ಟಣ ತಾಲೂಕಿನಲ್ಲಿ ಮಳೆ ಹಾನಿ

ಪಿರಿಯಾಪಟ್ಟಣ: ತಾಲೂಕಿನಾದ್ಯಂತ ಸೋಮವಾರ ಸುರಿದ ಮಳೆ ವಿವಿಧೆಡೆ ಹಾನಿ ಉಂಟು ಮಾಡಿದೆ. ತಾಲೂಕಿನ ಕೊಪ್ಪ, ಬೈಲುಕುಪ್ಪೆ, ಹುಣಸವಾಡಿ, ಮರಡಿಯೂರು, ತೆಲಗಿನಕುಪ್ಪೆ, ಕೋಮಲಾಪುರ, ಹಾರನಹಳ್ಳಿ, ಬೆಟ್ಟದಪುರ, ಗೊರಳ್ಳಿ, ಸುರಗಳ್ಳಿ, ಚಪ್ಪರದಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ.

ಮಳೆ ನೀರಿನ ರಭಸಕ್ಕೆ ಜಮೀನುಗಳಲ್ಲಿ ನಾಟಿ ಮತ್ತು ಬಿತ್ತನೆ ಮಾಡಿದ್ದ ತಂಬಾಕು, ಶುಂಠಿ, ಜೋಳ ಮತ್ತಿತರ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಹೆಚ್ಚು ಇಳುವರಿ ಪಡೆಯಲು ಹಾಕಲಾಗಿದ್ದ ರಸಗೊಬ್ಬರ ಮತ್ತು ಕೀಟನಾಶಕಗಳು ನೀರು ಪಾಲಾಗಿವೆ. ಬಿರುಬಿಸಿಲಿನಿಂದ ಒಣಗಿದ್ದ ಕೆರೆ ಕಟ್ಟೆಗಳು ಹಲವು ಗ್ರಾಮಗಳಲ್ಲಿ ಒಂದೇ ಮಳೆಗೆ ತುಂಬಿ ಕೋಡಿ ಬಿದ್ದಿವೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ರಸ್ತೆಗಳು ಸಹ ಮಳೆಯಿಂದಾಗಿ ಜಲಾವೃತಗೊಂಡು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು. ಹಲವು ಜಮೀನುಗಳಲ್ಲಿ ರಭಸವಾಗಿ ನೀರು ಹರಿದ ಪರಿಣಾಮ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಕೊರಕಲು ಸೃಷ್ಟಿಯಾಗಿವೆ.

ತಾಲೂಕಿನ ಬೈಲುಕುಪ್ಪೆ ಸಮೀಪದ ಸುಂಕದ ಹಳ್ಳಿ ಮತ್ತು ಮರಡಿಯೂರು ಬಳಿ ಕೆರೆ ಪುನರ್ ಅಭಿವೃದ್ಧಿ ಕಾಮಗಾರಿಯ ಅಪೂರ್ಣ ಕೆಲಸಗಳಿಂದಾಗಿ ಹಾಗೂ ಕೆರೆ ಭರ್ತಿಯಾದ ನೀರು ಹೊರ ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದಿರುವ ಕಾರಣ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಮರಡಿಯೂರು ಗ್ರಾಮದ ಸತೀಶ, ರಾಮಪ್ಪ, ಶಮಿ ಇತರರ ಜಮೀನುಗಳಲ್ಲಿ ಇದ್ದ ಬೆಳೆ ನಾಶ ಆಗುವುದರ ಜತೆಗೆ ನೀರು ಹಾಯಿಸಲು ಅಳವಡಿಸಿದ್ದ ಪೈಪ್‌ಗಳನ್ನು ಸಹ ಮಳೆ ನೀರು ಹೊತ್ತೊಯ್ದಿದೆ. ಕೆರೆ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಗ್ರಾಮ ಪಂಚಾಯಿತಿ ಸದಸ್ಯರ ನಿರ್ಲಕ್ಷೃದಿಂದಾಗಿ ಗ್ರಾಮಸ್ಥರು ತೊಂದರೆ ಅನುಭವಿಸುವಂತೆ ಆಗಿದೆ ಎಂದು ಗ್ರಾಮಸ್ಥ ಸತೀಶ್ ಆರೋಪಿಸಿದ್ದಾರೆ. ತಾಲೂಕಿನಲ್ಲಿ ಮೇ ತಿಂಗಳಿನಲ್ಲಿನ ವಾಡಿಕೆಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಮಳೆ ಸುರಿದಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.