ನ್ಯೂಸ್

ಕರಾವಳಿ ಮಾತ್ರವಲ್ಲದೆ ರಾಜ್ಯದೆಲ್ಲೆಡೆ ಭಾರೀ ಮಳೆ, ಮಲೆನಾಡಿನಂತಾದ ಸಿಲಿಕಾನ್​ ಸಿಟಿ..!

ಬೆಂಗಳೂರು: ಕೊಡಗು, ದಕ್ಷಿಣಕನ್ನಡ, ಸೇರಿದಂತೆ ರಾಜ್ಯಾದ್ಯಂತ ವರುಣಾರ್ಭಟ ಜೋರಾಗಿದೆ. ಸೋಮವಾರ ಮತ್ತು ಮಂಗಳವಾರ ನಿರಂತರ ಸುರಿದ ಮಳೆಯಿಂದಾಗಿ ಮಳೆನಾಡಿನ ತುಂಗಾ, ಭದ್ರಾ, ಶರಾವತಿ, ವರದಾ ಹಾಗೂ ಕುಮದ್ವತಿ ನದಿಗಳು ಉಕ್ಕಿ ಹರಿಯುತ್ತಿವೆ.

ಮಂಗಳವಾರ ಒಂದೇ ದಿನ 24 ಗಂಟೆಯ ಅವಧಿಯೊಳಗೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವರುಣನ ಆರ್ಭಟದಿಂದ ಜಲಾಶಯಗಳಿಗೆ ದಾಖಲೆ ಮಟ್ಟದಲ್ಲಿ ಹರಿದು ಬಂದಿದೆ.

ಬೆಂಗಳೂರು ನಗರ ಕೆಲ ದಿನಗಳಿಂದ ಮಲೆನಾಡಿನಂತಾಗಿದೆ. ಇಡೀ ದಿನ ಮೋಡ ಮುಸುಕಿದ ವಾತಾವರಣ. ಒಮ್ಮೆ ಜಿಟಿ ಜಿಟಿ ಮಳೆ ಬಿದ್ದರೆ, ಮತ್ತೊಮ್ಮೆ ರಭಸವಾಗಿ ಸುರಿಯುವ ಮಳೆ ಬೆಂಗಳೂರಿಗರನ್ನು ಹೈರಾಣಾಗಿಸಿದೆ. ಸೋಮವಾರದಂದು ನೃಪತುಂಗ ರಸ್ತೆ, ಫ್ರೀಡಂ ಪಾರ್ಕ್ ಸಮೀಪ, ಆರ್‌.ಟಿ. ನಗರ ರಸ್ತೆ, ಹೆಬ್ಬಾಳ ಮೇಲುಸೇತುವೆ , ಎಸ್ಟೀಮ್‌ ಮಾಲ್‌ ಬಳಿ, ಹೊಸೂರು ರಸ್ತೆ, ಸರ್ಜಾಪುರ ರಸ್ತೆ, ಕೂಡ್ಲುಗೇಟ್‌ ಸಮೀಪ, ಬೊಮ್ಮನಹಳ್ಳಿ, ಇತ್ತ್ತ, ನಾಯಂಡಹಳ್ಳಿ ರಸ್ತೆ, ಆರ್‌ಆರ್‌ ನಗರ ಸೇರಿದಂತೆ ನಗರದ ನಾನಾ ಕಡೆ ಸಂಚಾರ ದಟ್ಟಣೆ ಉಂಟಾಗಿತ್ತು.

ಅನೇಕ ಕಡೆ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನಗಳು ಆಮೆಗತಿಯಲ್ಲಿ ಸಾಗಿದವು ಇದರಿಂದ ಟ್ರಾಫಿಕ್ ಜಾಂ ಉಂಟಾಗಿ ವಾಹನ ಸವಾರರು ಪರದಾಡುವ ಸ್ಥಿತಿಯೂ ನಿರ್ಮಾಣವಾಗಿತ್ತು.

ಕರಾವಳಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ಮೂರು ಜಿಲ್ಲೆಗಳಿಗೂ ಇಂದು ಹಾಗೂ ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿಗೆ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಿದ್ದು, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಸಾಧಾರಣ ಅಥವಾ ತುಂತುರು ಮಳೆಯಾಗುವ ಸಾಧ್ಯತೆಯಿದೆ.