ನ್ಯೂಸ್

ಮಳೆ ಅವಾಂತರಕ್ಕೆ ಬೆಳೆ ನಾಶ : ಆತಂಕದಲ್ಲಿ ಅನ್ನದಾತ ತೇವಾಂಶ ಹೆಚ್ಚಳಕ್ಕೆ ಬಿತ್ತನೆ ಕುಂಠಿತ

Chikkaballapur

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅತಿವೃಷ್ಟಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿರುವುದರ ನಡುವೆ ನಿರಂತರ ಮೋಡ ಮುಸುಕಿದ ವಾತಾವರಣ ಮತ್ತು ಜಡಿಮಳೆಗೆ ಹಲವು ಬೆಳೆಗಳು ಕೈ ಕೊಡುವ ಆತಂಕ ರೈತರಿಗೆ ಎದುರಾಗಿದೆ.

ಈಗಾಗಲೇ ಹಲವೆಡೆ ಹುಲುಸಾಗಿ ಬೆಳೆದು ಕಾಳುಗಟ್ಟಿ ನಿಂತಿದ್ದ ರಾಗಿ ತೆನೆಯ ಗಿಡಗಳು ನಿರಂತರ ಜಡಿಮಳೆಗೆ ನೆಲಕ್ಕುರುಳುತ್ತಿದ್ದರೆ ಕೆಲವು ಕಡೆ ಮೊಳಕೆ ಹೊಡೆದು ಇಳುವರಿ ಹಾಳಾಗುತ್ತಿದೆ. ದಾಳಿಂಬೆ, ಅಲೂಗಡ್ಡೆ, ದ್ರಾಕ್ಷಿ ಬೆಳೆಗೆ ನಾನಾ ಕಾಯಿಲೆ, ತರಕಾರಿ ಬೆಳೆಗಳು ಕೊಳೆತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ತೇವಾಂಶ ಹೆಚ್ಚಳದಿಂದ ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲಿ ಬಿತ್ತನೆಯಲ್ಲೂ ಹಿನ್ನೆಡೆ ಕಂಡು ಬರುತ್ತಿದೆ.

ಈಗಾಗಲೇ ಚಿಕ್ಕಬಳ್ಳಾಪುರ ತಾಲೂಕಿನ ನಂದಿ, ಮಂಡಿಕಲ್ಲು, ಚಿಂತಾಮಣಿ ತಾಲೂಕಿನ ಕೈವಾರ, ಮುರುಗಮಲ್ಲಾ ಸೇರಿ ವಿವಿಧೆಡೆ ಹುಲುಸಾಗಿ ಬೆಳೆದಿದ್ದ ರಾಗಿ ತೆನೆಯ ಗಿಡಗಳು ಬಾಗಿವೆ. ಮುಂಬರುವ ದಿನಗಳಲ್ಲಿ ಜಡಿ ಮಳೆ ಮುಂದುವರೆದಲ್ಲಿ ಮತ್ತಷ್ಟು ನಷ್ಟ ಉಂಟಾಗುತ್ತದೆ ಎಂಬ ಅಳಲು ರೈತರಲ್ಲಿ ಕೇಳಿ ಬರುತ್ತಿದೆ.

ಈ ಬಾರಿ ಮುಂಗಾರು, ಹಿಂಗಾರು ಅವಧಿಯ ಪ್ರಾರಂಭದಲ್ಲಿ ವಾಡಿಕೆ ಮಳೆಗಿಂತಲೂ ದಾಖಲೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಸಮೃದ್ಧ ನೀರಿನಿಂದ ಜಲ ಮೂಲಗಳಿಗೆ ಗತ ವೈಭವ ಬಂದಿದೆ. ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಕೊಳವೆ ಬಾವಿಗಳ ವೈಫಲ್ಯವೂ ಕಡಿಮೆಯಾಗಿದೆ. ಇದು ಖುಷಿ ತಂದು ಕೊಟ್ಟರೂ ನಿರಂತರ ಮೋಡ ಮುಸುಕಿದ ವಾತಾವರಣ ಮತ್ತು ಮಳೆ ಅವಾಂತರಕ್ಕೆ ಬಹುತೇಕ ಬೆಳೆಗಳು ಹಾಳಾಗುತ್ತಿವೆ.

ಅಧಿಕ ತೇವಾಂಶಕ್ಕೆ ಬಿತ್ತನೆ ಕುಂಠಿತ: ಮುಂಗಾರು ಅವಧಿಯಲ್ಲಿ ಧಾರಾಕಾರ ಮಳೆಗೆ ನೀರು ತೋಟಗಳಿಗೆ ನುಗ್ಗಿ ಭಾರಿ ನಷ್ಟ ಉಂಟಾಯಿತು. ಇದೀಗ ಹಿಂಗಾರಿನಲ್ಲಿ ಅಧಿಕ ತೇವಾಂಶವು ಬಿತ್ತನೆ ಕುಂಠಿತಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಭತ್ತ, ರಾಗಿ, ಮುಸುಕಿನ ಜೋಳ, ಹುರುಳಿ, ನೆಲಗಡಲೆ, ಸೂರ್ಯಕಾಂತಿ ಸೇರಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಕೃಷಿ ಇಲಾಖೆಯು ಹಿಂಗಾರು ಅವಧಿಯಲ್ಲಿ 2193 ಹೆಕ್ಟೇರ್ ನೀರಾವರಿ ಮತ್ತು 1798 ಹೆಕ್ಟೇರ್ ಖುಷ್ಕಿ ಪ್ರದೇಶ ಸೇರಿ 3991 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈ ಪೈಕಿ ಕೇವಲ ಇಲ್ಲಿಯವರೆಗೂ 372 ಹೆಕ್ಟೇರ್ ಪ್ರದೇಶದಲ್ಲಿ ಸಾಧನೆ ಕಂಡು ಬಂದಿದೆ. ಅಕ್ಟೋಬರ್ ಮೊದಲ ವಾರದಿಂದ ಹಿಂಗಾರು ಬಿತ್ತನೆ ಆರಂಭವಾಗಿದೆ. ಆದರೆ, ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಮಳೆ ಮತ್ತು ನಿರಂತರವಾಗಿ ಮೋಡ ಕವಿದ ವಾತಾವರಣ ಇರುವುದರಿಂದ ಭೂಮಿಯ ತೇವಾಂಶ ಅಧಿಕವಾಗಿರುವುದು ಬಿತ್ತನೆ ಕಾರ್ಯಕ್ಕೆ ಅಡ್ಡಿಯಾಗಿದೆ.

ಅಪಾರ ಪ್ರಮಾಣದಲ್ಲಿ ನಷ್ಟ: ಅಕ್ಟೋಬರ್‌ನಲ್ಲಿ ಸುರಿದ ಧಾರಾಕಾರ ಮಳೆಗೆ ಹೂವು, ಹಣ್ಣು, ತರಕಾರಿ ಸೇರಿ 5 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ಕೈಗೊಂಡು ನಷ್ಟ ಉಂಟಾಗಿರುವುದರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಇದರ ನಡುವೆ ಗಾಯದ ಮೇಲೆ ಬರೆ ಎಳೆಯುವಂತೆ ಹಿಂಗಾರಿನಲ್ಲೂ ಬೆಳೆ ನಷ್ಟ ಮುಂದುವರೆದಿದೆ.

ಒಂದೂವರೆ ಎಕರೆ ಜಮೀನಿನಲ್ಲಿ ರಾಗಿ ಬೇಳಿದಿದ್ದು, ಈ ಬಾರಿ ಉತ್ತಮ ಇಳುವರಿ ಬಂದಿರುವುದುರಿಂದ ಒಳ್ಳೆಯ ಆದಾಯ ಬರಬಹುದು ಎಂದು ನಿರೀಕ್ಷಿಸಿದ್ದೆ. ಆದರೆ, ಜಡಿಮಳೆಗೆ ಬೆಳೆ ಸಂಪೂರ್ಣ ನೆಲಕ್ಕೆ ಬಾಗಿದೆ. ಕೆಲವು ಕಡೆ ಮೊಳಕೆಯೂ ಬಂದಿದೆ. ಮಂಜುನಾಥ್, ಯಲುವಹಳ್ಳಿ ರೈತ