ನ್ಯೂಸ್

ಕೋವಿಡ್-19 ಆರೈಕೆ ಕೇಂದ್ರಗಳಿಗೆ ವೈದ್ಯರನ್ನು ನಿಯೋಜಿಸಲಿದೆ ಭಾರತೀಯ ರೈಲ್ವೆ

sspmiracle1982

ನವದೆಹಲಿ: ಕೋವಿಡ್ -19 ರೋಗಿಗಳ ಆರೈಕೆ ಕೇಂದ್ರಗಳಾಗಿ ದೇಶದ 215 ರೈಲ್ವೆ ಕೇಂದ್ರಗಳನ್ನು ಗುರುತಿಸಿರುವ ಭಾರತೀಯ ರೈಲ್ವೆ, ಆ ಕೇಂದ್ರಗಳಲ್ಲಿ ವೈದ್ಯರು, ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ಗುರುವಾರ ತಿಳಿಸಿದೆ.

ಕೋವಿಡ್ ರೋಗಿಗಳ ಆರೈಕೆ ಕೇಂದ್ರಗಳಾಗಿ ಪರಿವರ್ತಿತ ರೈಲ್ವೆ ಬೋಗಿಗಳಲ್ಲಿ 2500 ವೈದ್ಯರು ಹಾಗೂ 35 ಸಾವಿರ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಈ ಬೋಗಿಗಳಿಗೆ ನಿಯೋಜಿಸಲಾಗುತ್ತದೆ ಎಂದು ತಿಳಿಸಿದೆ.

ವಿವಿಧ ವಲಯಗಳು ತಾತ್ಕಾಲಿಕ ಆಧಾರದ ಮೇಲೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನೇಮಕಗೊಳಿಸುತ್ತಿವೆ. ಕೋವಿಡ್- 19 ಆಸ್ಪತ್ರೆಗಳಿಗೆ ಹತ್ತಿರದಲ್ಲೇ ಈ ರೈಲ್ವೆ ವ್ಯವಸ್ಥೆ ಮಾಡಲಾಗಿದೆ.

ರೋಗಿಗಳ ಆರೈಕೆಗಾಗಿ 17 ಕೋವಿಡ್ ಆಸ್ಪತ್ರೆಗಳಲ್ಲಿ 5,000 ಹಾಸಿಗೆಗಳು ಮತ್ತು ರೈಲ್ವೆ ಆಸ್ಪತ್ರೆಗಳಲ್ಲಿ 33 ಹಾಸ್ಪಿಟಲ್ ಬ್ಲಾಕ್​ಗಳಿದ್ದು ಯಾವುದೇ ತುರ್ತು ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಲು ಸಿದ್ಧವಿರುವುದಾಗಿ ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ, ರಾಜ್ಯಗಳು ಕೋರಿದಲ್ಲಿ ಈ ಸೌಲಭ್ಯವನ್ನು ರಾಜ್ಯಗಳು ಹಾಗೂ ಕೇಂದ್ರ ಸರ್ಕಾರಗಳಿಗೆ ಹಂಚಿಕೆ ಮಾಡಲಾಗುತ್ತದೆ. ಭಾರತದ ಪ್ರಮುಖ ಕೋವಿಡ್ ಹಾಟ್​ಸ್ಪಾಟ್ ಪ್ರದೇಶಗಳು, ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೂ ಈ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ರೈಲ್ವೆ ತಿಳಿಸಿದೆ.