ನವದೆಹಲಿ: ಭಾರತದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೋವಿಡ್-19 ಸೋಂಕಿನ ತಡೆಗೆ ಜನರಲ್ಲಿ ಇನ್ನೂ ಹೆಚ್ಚು ಜಾಗೃತಿ ಮೂಡಿಸುವ ಅನಿವಾರ್ಯತೆ ಉಂಟಾಗಿದೆ. ಹೀಗಾಗಿ ವಿವಿಧ ರಾಜ್ಯ ಸರ್ಕಾರಗಳು ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವಾಲಯವು ‘ಬ್ರೇಕ್ ದಿ ಔಟ್ ಬ್ರೇಕ್’ ಎಂಬ ಹೆಸರಿನಲ್ಲಿ ‘ಕರೋನಾ ಕೋ ಹೈ ಬಗಾನಾ’ ಎಂಬ ಹಾಡನ್ನು ಬಿಡುಗಡೆ ಮಾಡಿದೆ.
ಇದಕ್ಕೆ ‘ಐ ಆಮ್ ಎ ಡಿಸ್ಕೋ ಡಾನ್ಸರ್’ ಹಾಡಿನ ಟ್ಯೂನ್ ಬಳಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಹಾಡಿಗೆ ಅಪಾರ ಪ್ರಶಂಸೆ ಕೂಡ ದೊರೆತಿದೆ.
‘ನೀವು ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ, ಆಗಾಗ ಕೈಯನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ’ ಎಂದು ಟ್ವೀಟ್ ಮಾಡಿರುವ ರೈಲ್ವೆ ಸಚಿವಾಲಯ, ತಾನು ಕೈಗೊಂಡ ಸುರಕ್ಷತಾ ಕ್ರಮಗಳ ಬಗೆಗೂ ಮಾಹಿತಿ ನೀಡಿದೆ.