ಟೋಕಿಯೋ: ಜಪಾನ್ನಲ್ಲಿ ಕೇವಲ 6 ಗಂಟೆಯಲ್ಲಿ ವಿಶ್ವದ ಮೊದಲ 3ಡಿ ಪ್ರಿಂಟೆಡ್ ರೈಲು ನಿಲ್ದಾಣವನ್ನು ನಿರ್ವಿುಸಲಾಗಿದೆ. ಜಪಾನ್ನ ಅರಿಡಾ ನಗರದ ಹಟ್ಸುಶಿಮಾ ರೈಲು ನಿಲ್ದಾಣದಲ್ಲಿ 3ಡಿ ತಂತ್ರಜ್ಞಾನ ಬಳಸಿ ಹೊಸ ಕಟ್ಟಡ ನಿರ್ವಿುಸಲಾಗಿದೆ.
ಜಪಾನ್ನ ಪ್ರಮುಖ ರೈಲ್ವೆ ಕಂಪನಿಯಾದ ಜಪಾನ್ ರೈಲ್ವೆ ಕಂಪನಿ ರೈಲು ನಿಲ್ದಾಣದ ಭಾಗಗಳನ್ನು ಬೇರೆಡೆ 3ಡಿ ತಂತ್ರಜ್ಞಾನದಲ್ಲಿ ಪ್ರಿಂಟ್ ಮಾಡಿ ಹಟ್ಸುಶಿಮಾದಲ್ಲಿ ಅದನ್ನು ಜೋಡಿಸಿದೆ. 3ಡಿ ತಂತ್ರಜ್ಞಾನದಲ್ಲಿ ಕಟ್ಟಡದ ಭಾಗಗಳನ್ನು ಪ್ರಿಂಟ್ ಮಾಡಲು ಮತ್ತು ಅಳವಡಿಸಲು 7 ದಿನ ಬೇಕಾಯಿತು.
ಸಾಮಾನ್ಯವಾಗಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹಲವು ತಿಂಗಳೂ ಬೇಕಾಗುತ್ತದೆ. ಹಾಗಾಗಿ ಫ್ಯಾಕ್ಟರಿಯಲ್ಲಿ 3ಡಿ ತಂತ್ರಜ್ಞಾನದಲ್ಲಿ ಕಟ್ಟಡದ ಭಾಗಗಳನ್ನು ಮೊದಲೇ ಸಿದ್ಧಪಡಿಸಿ ಅಳವಡಿಸುವುದರಿಂದ ಸಮಯದ ಉಳಿತಾಯವಾಗುತ್ತದೆ.
ಹಟ್ಸುಶಿಮಾದಲ್ಲಿ ರಾತ್ರಿ ಕೊನೆಯ ರೈಲು ಹೊರಟ ಬಳಿಕ ಕೆಲಸ ಆರಂಭವಾಗಿ, ಬೆಳಗ್ಗೆ ಮೊದಲ ರೈಲು ಬರುವಷ್ಟರಲ್ಲಿ ನಿರ್ಮಾಣ ಕಾರ್ಯ ಮುಗಿದಿತ್ತು. ಹೊಸ ರೈಲು ನಿಲ್ದಾಣ 100 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ಟಿಕೆಟ್ ಮಷಿನ್ ಮತ್ತು ಕಾರ್ಡ್ ರೀಡರ್ ಯಂತ್ರಗಳ ಅಳವಡಿಕೆ ಕಾರ್ಯ ಬಾಕಿ ಇದೆ. ಜುಲೈ ವೇಳೆಗೆ ಹೊಸ ಕಟ್ಟಡ ಪ್ರಯಾಣಿಕರ ಸೇವೆಗೆ ಸಿದ್ಧವಾಗಲಿದೆ ಎಂದು ರೈಲ್ವೆ ಕಂಪನಿ ತಿಳಿಸಿದೆ.