ನ್ಯೂಸ್

ಜುಲೈ ಅಂತ್ಯಕ್ಕೆ ರೈಲು ನಿಲ್ದಾಣ ಕಾಮಗಾರಿ ಪೂರ್ಣ

ದಾವಣಗೆರೆ: ನಗರದ ರೈಲು ನಿಲ್ದಾಣವನ್ನು 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು ಉತ್ತಮ ಸೌಲಭ್ಯಗಳೊಂದಿಗೆ ಜುಲೈ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಂಸದ ಜಿ.ಎಂ. ಸಿದೇಶ್ವರ ಹೇಳಿದರು.
ನಗರದ ರೈಲು ನಿಲ್ದಾಣದಲ್ಲಿ ಶುಕ್ರವಾರ, 4.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಎರಡನೇ ಪ್ರವೇಶದ್ವಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ದಿನ ಸುಮಾರು 6500 ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಿದ್ದಾರೆ. 50ಕ್ಕೂ ಹೆಚ್ಚು ರೈಲುಗಳು ಪ್ರತಿ ದಿನ ಸಂಚರಿಸುತ್ತವೆ. ಈ ನಿಲ್ದಾಣದಿಂದ ತಿಂಗಳಿಗೆ 1.5 ಕೋಟಿ ರೂ. ಆದಾಯ ಬರುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣದಲ್ಲಿ 4 ಎಸ್ಕಲೇಟರ್‌ಗಳನ್ನು ಅಳವಡಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಎರಡನೇ ಪ್ರವೇಶದ್ವಾರದ ಬಳಿ ರಸ್ತೆ ಅಗಲೀಕರಣ ಮಾಡುವ ಅಗತ್ಯವಿದೆ. ಈ ಭಾಗದಲ್ಲಿರುವ ಮಳಿಗೆಗಳನ್ನು ತೆರವುಗೊಳಿಸಿ ಸಿಮೆಂಟ್ ರಸ್ತೆ ಅಭಿವೃದ್ಧಿಪಡಿಸುವಂತೆ ಮೇಯರ್‌ಗೆ ಮನವಿ ಮಾಡಿದರು. ಮಾಯಕೊಂಡದಿಂದ ಹರಿಹರದ ವರೆಗೆ ಈಗಾಗಲೇ 250 ಕೋಟಿ ರೂ. ವೆಚ್ಚದಲ್ಲಿ ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದೆ. 2021ರ ಮಾರ್ಚ್ ವೇಳೆಗೆ ಈ ಕಾಮಗಾರಿ ಹುಬ್ಬಳ್ಳಿಯ ವರೆಗೆ ವಿಸ್ತರಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಡಿಸಿಎಂ ಟೌನ್‌ಶಿಪ್ ಬಳಿ ಸೇತುವೆ ಅವೈಜ್ಞಾನಿಕವಾಗಿತ್ತು. ಹಾವಿನಂತೆ ಅಂಕುಡೊಂಕಾಗಿದೆ ಎಂದು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಕಿಚಾಯಿಸಿದ್ದರು. ಅದನ್ನು ಸರಿಪಡಿಸದಿದ್ದರೆ ಡಬ್ಲಿಂಗ್ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದೆ. 18 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು. ಹರಿಹರದ ಅಮರಾವತಿ ಬಳಿ 30 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರವೇ ಉದ್ಘಾಟಿಸಲಾಗುವುದು ಎಂದು ಹೇಳಿದರು. ಚಿಕ್ಕಜಾಜೂರಿನಿಂದ ಹರಿಹರದ ವರೆಗೆ 80 ಕೋಟಿ ವೆಚ್ಚದಲ್ಲಿ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ಮಾನವಸಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ಬದಲಾಯಿಸಿ ಸಬ್‌ವೇಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಸಾರ್ವಜನಿಕರಿಗೆ ಪರಿಣಾಮಕಾರಿ ಸೇವೆ ನೀಡಲು 500 ಪ್ಯಾಸೆಂಜರ್ ರೈಲುಗಳು ಮತ್ತು 750 ರೈಲು ನಿಲ್ದಾಣಗಳನ್ನು 2025ರ ವೇಳೆಗೆ ಖಾಸಗಿಯವರಿಗೆ ವಹಿಸುವ ಬಗ್ಗೆ ರೈಲ್ವೆ ಸಚಿವಾಲಯ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿಸಿದರು. ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಹುಬ್ಬಳ್ಳಿ ಮತ್ತು ಶಿವಮೊಗ್ಗದಿಂದ ಬೆಂಗಳೂರಿಗೆ ಸಕಾಲದಲ್ಲಿ ತಲುಪಲು ರೈಲುಗಳ ಸೌಲಭ್ಯ ಉತ್ತಮವಾಗಿದೆ. ಶಿವಮೊಗ್ಗದಿಂದ ಹೊಸದಾಗಿ ಏಳೆಂಟು ರೈಲುಗಳನ್ನು ಬಿಟ್ಟಿದ್ದಾರೆ. ಆದರೆ ದಾವಣಗೆರೆಗೆ ರಾತ್ರಿ 1 ಗಂಟೆಯ ನಂತರ ರೈಲುಗಳು ಬರುತ್ತವೆ. ಅವು ಬೆಂಗಳೂರು ತಲುಪುವುದು ತಡವಾಗುತ್ತದೆ. ಸರ್ಕಾರಿ ಕಚೇರಿಗಳು, ನ್ಯಾಯಾಲಯಗಳಿಗೆ ಹೋಗಲು ಅನುಕೂಲವಾಗುವಂತೆ ರೈಲುಗಳ ವ್ಯವಸ್ಥೆ ಮಾಡಿ ಎಂದು ಸಂಸದರಿಗೆ ಕೇಳಿಕೊಂಡರು. ಜಿ.ಪಂ. ಅಧ್ಯಕ್ಷೆ ಯಶೋದಮ್ಮ ಮರುಳಪ್ಪ ಮಾತನಾಡಿದರು. ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗರ್ಗ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಉಪ ಮೇಯರ್ ಸೌಮ್ಯಾ ನರೇಂದ್ರ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಇದ್ದರು. ... ರೈಲ್ವೆ ಗೇಟ್ ಸಮಸ್ಯೆ ಶೀಘ್ರ ಇತ್ಯರ್ಥ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಶೋಕ ಟಾಕೀಸ್ ಬಳಿಯ ರೈಲ್ವೆ ಗೇಟ್ ಸಮಸ್ಯೆ ಕೆಲವೇ ದಿನಗಳಲ್ಲಿ ಬಗೆಹರಿಯಲಿದೆ. ತಾವು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕುಳಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.