ನ್ಯೂಸ್

ರೈಲ್ವೆ ಗೇಟ್ ರಸ್ತೆ ಅವ್ಯವಸ್ಥೆ : ಅತಿಕಾರಿಬೆಟ್ಟು-ಮೈಲೊಟ್ಟು ಮಾರ್ಗ ಸಂಚಾರ ದುಸ್ತರ : ಅಧಿಕಾರಿಗಳ ನಿರ್ಲಕ್ಷ್ಯ

ಸೌಮ್ಯ ಆರ್

ಭಾಗ್ಯವಾನ್ ಮೂಲ್ಕಿ ಅತಿಕಾರಿಬೆಟ್ಟು ಗ್ರಾಮ ವ್ಯಾಪ್ತಿಯ ಮೈಲೊಟ್ಟು ರೈಲ್ವೆ ಗೇಟ್ ಬಳಿಯ ರಸ್ತೆ ಸಂಪೂರ್ಣ ನಾಶವಾಗಿ ವಾಹನ ಸಂಚಾರ ಸಮಸ್ಯೆಯಾಗಿ ಪರಿಣಮಿಸಿದೆ. ಕಿನ್ನಿಗೋಳಿ ತಾಳಿಪ್ಪಾಡಿ, ಕೊಲ್ಲೂರು ಬಳಕುಂಜೆ, ಮೊಲೊಟ್ಟು ಪಲಿಮಾರು ಸಂಪರ್ಕ ರಸ್ತೆಗಳನ್ನು ಮೂಲ್ಕಿಗೆ ಜೋಡಿಸುವ ಮುಖ್ಯರಸ್ತೆಯಲ್ಲಿ ಬರುವ ರೈಲ್ವೆ ಗೇಟ್ ಇದಾಗಿದ್ದು, ಹಲವು ಪ್ರಸಿದ್ಧ ದೇವಾಲಯಗಳನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಹೊಂಡ ಗುಡಿಗಳಾಗಿದ್ದು ಜನ ಸಾಮಾನ್ಯರಿಗೆ ಬಹಳ ಸಮಸ್ಯೆಯಾಗಿದೆ. ಗ್ರಾಮಸಭೆಗಳಲ್ಲಿ ಮನವಿ: ರೈಲ್ವೆ ಇಲಾಖೆ ಕಾನೂನು ಎದುರಿಸಿಕೊಂಡು ಆಮೆವೇಗದ ಅಭಿವೃದ್ಧಿ ಮಾಡುತ್ತಿದೆ. ರಸ್ತೆ ಅವ್ಯವಸ್ಥೆ ಬಗ್ಗೆ ಅನೇಕ ಬಾರಿ ಗ್ರಾಮಸ್ಥರು ಅತಿಕಾರಿಬೆಟ್ಟು ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದ್ದು, ಬಳಿಕ ಪಂಚಾಯಿತಿ ಕೊಂಕಣ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದರೂ ಇಲಾಖೆ ಅಧಿಕಾರಿಗಳ ನಿರ್ಲಕ್ಷೃದಿಂದ ರಸ್ತೆ ದುರಸ್ತಿಯಾಗಿಲ್ಲ. ದಾರಿದೀಪ ಸಮಸ್ಯೆ: ಈ ಭಾಗದಲ್ಲಿ ದಾರಿದೀಪಗಳು ಅವ್ಯವಸ್ಥೆಯಿಂದ ಕೂಡಿದ್ದು, ರೈಲ್ವೆ ಗೇಟ್ ಬಳಿ ರೈಲು ಬಂದರೆ ಸರಿಯಾಗಿ ಗೋಚರಿಸುತ್ತಿಲ್ಲ. ಪ್ರತಿ ಮಳೆಗಾಲದಲ್ಲಿ ರಸ್ತೆ ಇಕ್ಕೆಲಗಳ ಗೋಡೆಗಳು ಕುಸಿತವಾಗುತ್ತಿದ್ದು, ತೀರ ಅಪಾಯಕಾರಿಯಾಗಿದೆ. ಪರಿಣಾಮ ಶೂನ್ಯ: ರೈಲ್ವೆ ಗೇಟ್ ಬಳಿಯ ಅಪಾಯಕಾರಿ ರಸ್ತೆ ಹೊಂಡ ತುಂಬಿಸಲು ಭಾರಿ ಗಾತ್ರದ ಜಲ್ಲಿಕಲ್ಲುಗಳನ್ನು ಹಾಕಿದ್ದು ಭಾರಿ ವಾಹನಗಳ ಸಂಚಾರದಿಂದ ಟಯರ್ ಒತ್ತಡಕ್ಕೆ ಜಲ್ಲಿ ಹಾರಿ ಅನಾಹುತಗಳಾಗುತ್ತಿವೆ. ಅಪಾಯಕಾರಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲಕರು ಬಿದ್ದು ಗಂಭೀರ ಗಾಯ ಮಾಡಿಕೊಳ್ಳುತ್ತಿದ್ದಾರೆ, ಈ ಬಗ್ಗೆ ಸತತ ದೂರು ನೀಡಿದರೂ ಪರಿಣಾಮ ಶೂನ್ಯ. ರೈಲ್ವೆ ಇಲಾಖೆ ನಿರ್ಲಕ್ಷದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾಂಬರು ರಸ್ತೆ ಬದಿಯ ಅಂಚುಗಳು ಕುಸಿದಿರುವುದು ಹಾಗೂ ಗುಂಡಿಗಳಿಗೆ ಹಾಕಲಾದ ಜಲ್ಲಿಕಲ್ಲುಗಳಿಗೆ ಸಿಲುಕಿ ಟಯರ್ ಒಡೆಯುವುದು ದಿನನಿತ್ಯದ ಗೋಳಾಗಿದೆ. ಅಸಮರ್ಪಕ ಚರಂಡಿ: ಈ ಭಾಗದಲ್ಲಿ ಚರಂಡಿ ನಿರ್ವಹಣೆ ಸರಿಯಾಗಿಲ್ಲ. ಮಳೆ ನೀರು ಸರಿಯಾಗಿ ಹರಿದು ಹೋಗದೆ ರಸ್ತೆ ಅವ್ಯವಸ್ಥೆಗೆ ಪ್ರಮುಖ ಕಾರಣವಾಗಿದೆ ಎನ್ನುವುದು ಸ್ಥಳೀಯರ ಮಾತು. ಫ್ಲೈ ಓವರ್ ಅಗತ್ಯ: ಕೊಲಕಾಡಿ, ಮೈಲೊಟ್ಟು ರೈಲ್ವೆ ಗೇಟ್ ಬಳಿ ರೈಲು ಬರುವ ಸಂದರ್ಭದಲ್ಲಿ ರೈಲ್ವೆ ಗೇಟ್ ಬಂದ್ ಆಗುತ್ತಿರುವುದು, ಸರಾಗವಾಗಿ ಬಹಳಷ್ಟು ರೈಲುಗಳು ಸಂಚರಿಸುವ ಕಾರಣ ಜನರಿಗೆ ಸಮಯ ವ್ಯರ್ಥವಾಗುತ್ತಿದೆ. ಉರಿ ಬಿಸಿಲು ಅಥವಾ ಮಳೆಯ ನಡುವೆ ಕ್ಯೂ ನಿಂತು ಗೇಟ್ ತೆರೆಯುವುದನ್ನು ಕಾಯುವವರ ಪಾಡು ಹೇಳತೀರದು ಇದರಿಂದ ಪ್ರಯಾಣಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ರೈಲ್ವೆ ಗೇಟ್‌ಗೆ ಪರ್ಯಾಯವಾಗಿ ಫ್ಲೈ ಓವರ್ ಅಗತ್ಯವಿದ್ದು ಅನೇಕ ಬಾರಿ ಮಕ್ಕಳ ಗ್ರಾಮಸಭೆಯಲ್ಲಿ ಹಾಗೂ ಪಂಚಾಯಿತಿ ಗ್ರಾಮಸಭೆಯಲ್ಲಿ ಪ್ರಸ್ತಾಪವಾಗಿ ಮನವಿ ಸಲ್ಲಿಸಿದರೂ ಕಾರ್ಯಗತಗೊಂಡಿಲ್ಲ.

ರಸ್ತೆ ಸಮಸ್ಯೆ ಜತೆ ಗೇಟ್‌ನಲ್ಲಿ ಗಂಟೆಗಟ್ಟಲೆ ಕಾಯುವ ಸ್ಥಿತಿಯಲ್ಲಿ ಇಲ್ಲಿನ ಬಾಡಿಗೆ ಯಾರಿಗೂ ಬೇಡ ಎನ್ನುವ ಸ್ಥಿತಿ ಇದೆ ರಸ್ತೆಯ ಸಮಸ್ಯೆ ಹೇಳತೀರದಾಗಿದೆ. ನಿರಂಜನ, ಆಟೋ ರಿಕ್ಷಾ ಚಾಲಕ ಕರ್ನಿರೆ ಗ್ರಾಮಸಭೆಯಲ್ಲಿ ಪ್ರಸ್ತಾವ ಬಂದ ಬಳಿಕ ಶಾಸಕರ ಗಮನಕ್ಕೆ ತರಲಾಗಿದೆ. ಬಳಿಕ ಮೀನುಗಾರಿಕೆ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಇಂಜಿನಿಯರ್‌ಗಳು ಬಂದು ಪರಿಶೀಲಿಸಿ ಹೋಗಿದ್ದಾರೆ. ಮಳೆಹಾನಿ ಸಂದರ್ಭ ಕೂಡ ಜಿಪಿಎಸ್ ಫೋಟೋ ಸರ್ಕಾರಕ್ಕೆ ನೀಡಲಾಗಿದೆ. ಆದರೆ ಈವರೆಗೆ ಸುದ್ದಿ ಇಲ್ಲ. ಮನೋಹರ ಕೋಟ್ಯಾನ್ ಉಪಾಧ್ಯಕ್ಷ, ಅತಿಕಾರಿಬೆಟ್ಟು ಪಂಚಾಯಿತಿ