ನ್ಯೂಸ್

ರೈಲ್ವೆ ಗೇಟ್​ ಬಂದ್​: ತಡವಾಗಿ ಬಂದ ರೈಲಿನಿಂದಾಗಿ ರೈಲ್ವೆ ಉದ್ಯೋಗಿ ದುರಂತ ಸಾವು

ವಿಜಯನಗರ: ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತೆರಳಲಾಗದೇ ರೈಲ್ವೆ ಉದ್ಯೋಗಿ ಒಬ್ಬರು ದುರಂತ ಸಾವಿಗೀಡಾಗಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಬಸವರಾಜ ಮೃತ ರೈಲ್ವೆ ಉದ್ಯೋಗಿ. ಇವರು ಹೊಸಪೇಟೆಯ ಮುದ್ಲಾಪುರದ ನಿವಾಸಿ. ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಬೆನ್ನಲ್ಲೇ ಗ್ರಾಮದಿಂದ ಕುಟುಂಬ ಸದಸ್ಯರೊಂದಿಗೆ ಆಸ್ಪತ್ರೆಗೆ ಹೋಗುತ್ತಿದ್ದರು.

ಮುದ್ಲಾಪುರ ಬಳಿ ರೈಲ್ವೆ ಗೇಟ್‌ ಹಾಕಲಾಗಿತ್ತು. ರೈಲುಗಳು ತಡವಾಗಿ ಬಂದದ್ದರಿಂದ ಬಸವರಾಜು ಆಸ್ಪತ್ರೆಗೆ ತಲುಪಲು ವಿಳಂಬವಾಗಿದೆ. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತುರ್ತು ಚಿಕಿತ್ಸೆಗೆ ಹೋಗುವವರಿಗೆ ಮಾನವೀಯ ನೆಲೆಗಟ್ಟಿನಲ್ಲಿ ರೈಲ್ವೆ ಗೇಟ್‌ ತೆಗೆದು ಅವಕಾಶ ಮಾಡಿಕೊಡಬಹುದಿತ್ತು. ಹೀಗೆ ಮಾಡದ ಕಾರಣ ಬಸವರಾಜು ಅವರು ಜೀವ ಕಳೆದುಕೊಳ್ಳಬೇಕಾಯಿತು.

ಬಸವರಾಜು ಸಾವಿಗೆ ರೈಲ್ವೆ ಇಲಾಖೆಯವರೇ ಹೊಣೆಗಾರರು ಎಂದು 2 ನೇ ವಾರ್ಡ್​ನ ನಗರಸಭೆ ಸದಸ್ಯ ಜೀವರತ್ನಂ ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)