ನವದೆಹಲಿ: ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆಗೆ ಆಸ್ಪದ ಕೊಡದ ರೀತಿಯ ಹೊಸ ವಿನ್ಯಾಸದ ಎಸಿ ಮತ್ತು ಸಾಮಾನ್ಯ ಬೋಗಿಗಳ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಕಪುರ್ತಲಾ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಸಿದ್ಧವಾಗಿರುವ ಹೊಸ ಮಾದರಿಯ ಎಸಿ ಮತ್ತು ಸಾಮಾನ್ಯ ಬೋಗಿಗಳ ತಯಾರಿಕೆಗೆ ಕ್ರಮವಾಗಿ 6 ಲಕ್ಷ ರೂ. ಮತ್ತು 3 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ವ್ಯಯಿಸಲಾಗುತ್ತಿದೆ.
ಹೊಸ ವಿನ್ಯಾಸದ ಕೋಚ್ಗಳಲ್ಲಿ ಕಾಲಿನಲ್ಲಿ ನಿಯಂತ್ರಿಸಬಹುದಾದ ವಾಷ್ ಬೇಸಿನ್ಗಳು, ಡಿಸ್ಪೆನ್ಸರ್ಗಳು ಮತ್ತು ಶೌಚಗೃಹದ ಫ್ಲಷ್ಗಳನ್ನು ಅಳವಡಿಸಲಾಗಿದೆ. ಮೊಣಕೈಯಲ್ಲಿ ನಿರ್ವಹಿಸಬಹುದಾದ ಡೋರ್ ಹ್ಯಾಂಡಲ್ಗಳನ್ನು ರೂಪಿಸಲಾಗಿದ್ದು, ಹ್ಯಾಂಡ್ರೈಲ್ಗಳಿಗೆ ವೈರಾಣುನಿರೋಧಕ ಕೋಟಿಂಗ್ ನೀಡಲಾಗುತ್ತಿದೆ. ತನ್ಮೂಲಕ ಯಾವುದೇ ಬಗೆಯ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಪ್ರತಿಯೊಂದು ಬೋಗಿಗಳ ಫಿಕ್ಚರ್ಗಳಿಗೆ ಟೈಟಾನಿಯಂ ಡೈಆಕ್ಸೈಡ್ ಕೋಟಿಂಗ್ ಬಳಿಸಲಾಗಿದೆ. ಎಸಿ ಡಕ್ಟ್ಗಳಿಗೆ ಪ್ಲಾಸ್ಮಾ ಏರ್ಎಕ್ವಿಪ್ಮೆಂಟ್ ಅಳವಡಿಸಲಾಗಿದ್ದು, ಎಸಿ ಬೋಗಿಗಳ ಒಳಾಂಗಣದಲ್ಲಿನ ಗಾಳಿಯನ್ನು ಐಯೋನೈಸ್ಡ್ ಏರ್ ಮೂಲಕ ಸ್ಟರ್ಲೈಸ್ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.
ಪ್ರತಿ ಎಸಿ ಬೋಗಿಗೆ ಟೈಟಾನಿಯಂ ಆಕ್ಸೈಡ್ ಕೋಟಿಂಗ್ ಮಾಡಲು 2.5 ಲಕ್ಷ ರೂ. ಹಾಗೂ ಪ್ಲಾಸ್ಮಾ ಐಯಾನ್ ಸಿಸ್ಟಂ ಅಳವಡಿಕೆಗೆ 3ರಿಂದ 3.5 ಲಕ್ಷ ರೂ. ವೆಚ್ಚವಾಗುತ್ತಿದೆ. ಸಾಮಾನ್ಯ ಬೋಗಿಗಳಿಗೆ ಪ್ಲಾಸ್ಮಾ ಐಯಾನ್ ಸಿಸ್ಟಂ ಅಳವಡಿಸದೇ ಇರುವ ಕಾರಣ 3 ಲಕ್ಷ ರೂ. ಹೆಚ್ಚುವರಿ ವೆಚ್ಚವಾಗುತ್ತಿರುವುದಾಗಿ ಹೇಳಿದ್ದಾರೆ.
ಈ ಖರ್ಚುವೆಚ್ಚವನ್ನು ತಗ್ಗಿಸಲು ಅಗತ್ಯ ಕಾರ್ಯತಂತ್ರ ರೂಪಿಸಲು ರೈಲ್ವೆ ಇಲಾಖೆಯು ಆಂತರಿಕವಾಗಿ ಸಂಶೋಧನೆಗೂ ಒತ್ತು ನೀಡಿದೆ. ಜತೆಗೆ, ಈ ನಿಟ್ಟಿನಲ್ಲಿ ಖಾಸಗಿ ವಲಯದಿಂದಲೂ ಸಲಹೆಗಳನ್ನು ಆಹ್ವಾನಿಸಲಾಗುತ್ತಿದೆ. ಯಾವುದೇ ಸಲಹೆ ನೀಡಿದರೂ ಅದು ದೀರ್ಘಕಾಲಿನ ಪರಿಹಾರವಾಗಿರಬೇಕು ಎಂದು ತಿಳಿಸಿದ್ದಾರೆ.