ನ್ಯೂಸ್

ಭಾರಿ ಮಳೆ..432 ರೈಲುಗಳ ಸಂಚಾರ ರದ್ದುಗೊಳಿಸಿದ ದಕ್ಷಿಣ ಮಧ್ಯ ರೈಲ್ವೆ- ಬಸ್​ ಸಂಚಾರದಲ್ಲೂ ವ್ಯತ್ಯಯ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದಾಗಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಇದೇ ಕಾರಣಕ್ಕೆ 432 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಿಸಿದೆ.

ಅಷ್ಟೇ ಅಲ್ಲ, 140 ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ. 13 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಇದರಲ್ಲಿ ಸೂಪರ್‌ಫಾಸ್ಟ್, ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಸೇರಿವೆ ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.

ಆಂಧ್ರ ಮತ್ತು ತೆಲಂಗಾಣದಲ್ಲಿ 80 ರೈಲು ಸಂಚಾರ ರದ್ದಾಗಿದೆ. ಉಳಿದ ರೈಲು ಸೇವೆಗಳು ತಮಿಳುನಾಡು ಮತ್ತಿತರ ಕಡೆ ಬರುತ್ತವೆ. 48 ರೈಲುಗಳ ಮಾರ್ಗ ಬದಲಿಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖವಾಗಿ ವಿಜಯವಾಡ - ಸಿಕಂದರಾಬಾದ್, ಗುಂಟೂರು - ಸಿಕಂದರಾಬಾದ್, ಕಾಕಿನಾಡ ಬಂದರು - ಲಿಂಗಂಪಲ್ಲಿ, ಗುಡೂರು - ಸಿಕಂದರಾಬಾದ್, ಸಿಕಂದರಾಬಾದ್ - ಸಿರ್ಪುರ್ ಕಾಗಜ್ ನಗರ, ಭದ್ರಾಚಲಂ - ಬಲ್ಲರ್ಷ, ಕಾಜಿಪೇಟ್ - ಡೋರ್ನಕಲ್, ಬಲ್ಲರ್ಶಾ - ಕಾಜಿಪೇಟ್, ಭದ್ರಾಚಲಂ - ಸಿಕಂದರಾಬಾದ್, ಹೈದ್ರಾಬಾದ್ - ಶಾಪತಂಬದಲಿ ರೈಲು ಮಾರ್ಗಗಳಲ್ಲಿ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಭಾರಿ ಪ್ರವಾಹದ ನೀರು ಹರಿಯುತ್ತಿದೆ. ಇದರಿಂದಾಗಿ ಟಿಜಿಎಸ್ ಆರ್ ಟಿಸಿ 560ಕ್ಕೂ ಹೆಚ್ಚು ಬಸ್ ಸಂಚಾರ ರದ್ದುಗೊಳಿಸಿದೆ.