ರಾಯಚೂರು: ಪಂಚಮಸಾಲಿ ಬಲಿಷ್ಠವಾದ ಸಮುದಾಯವಾಗಿದೆ. ಮೀಸಲಾತಿ ವಿಚಾರವನ್ನಿಟ್ಟುಕೊಂಡು ಸಮುದಾಯದ ಜಯಮೃತ್ಯುಂಜಯ ಸ್ವಾಮೀಜಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಮೀಸಲಾತಿ ಕೇಳುತ್ತಿರುವುದು ಸಂವಿಧಾನಕ್ಕೆ ಬಗೆದ ಅಪಚಾರವಾಗಿದೆ. ಜಯಮೃತ್ಯುಂಜಯ ಸ್ವಾಮೀಜಿ ಪೂರ್ಣಪ್ರಮಾಣದ ಸ್ವಾಮೀಜಿಯಲ್ಲ ಅವರಲ್ಲಿ ರಾಜಕಾರಣಿಯ ಮುಖವಿದೆ ಎಂದರು.
ಪಂಚಮಸಾಲಿ ಸಮುದಾಯದಲ್ಲಿ ಸಿಎಂ ಆಗಿದ್ದವರೂ ಇದ್ದಾರೆ, ಭೂ ಮಾಲೀಕರೂ ಇದ್ದಾರೆ ಜತೆಗೆ ಉನ್ನತ ಹುದ್ದೆಯಲ್ಲಿರುವವರು ಇದ್ದಾರೆ. ಅತ್ಯಂತ ಮುಂದುವರೆದ ಸಮುದಾಯವಾಗಿದೆ ಎಂದು ತಿಳಿಸಿದರು.
ಸಮುದಾಯದಲ್ಲಿರುವ ಬಡವರು, ಭೂಹೀೀನರ ಪರವಾಗಿ ಹೋರಾಟ ಮಾಡಬೇಕೇ ಹೊರತು, ಸಮಾಜದಲ್ಲಿ ಹೆಸರುವಾಸಿಯಾಗಲು, ಅಧಿಕಾರದ ಚುಕ್ಕಾಣಿ ಹಿಡಿಯಲು ಹೋರಾಟಕ್ಕೆ ಇಳಿಯಬಾರದು. ಸ್ವಾಮೀಜಿಗಳು ತಮ್ಮ ಹೆಸರಿನ ಮುಂದೆ ಕೂಡಲಸಂಗಮಶ್ರೀ, ಬಸವ ಎಂಬ ಪದಗಳನ್ನು ಬಳಸಿಕೊಳ್ಳಬಾರದು. ಪಂಚಮಸಾಲಿ ಸಮುದಾಯದ ಸ್ವಾಮೀಜಿಗೆ ಬಸವಣ್ಣನವರ ಹೆಸರು ಹೇಳುವ ಹಕ್ಕಿಲ್ಲ ಎಂದರು.
ಒಂದು ದೇಶ ಒಂದು ಚುನಾವಣೆ: ಹಲವು ಭಾಷೆ, ಸಂಸ್ಕೃತಿಯನ್ನು ಹೊಂದಿದ ವೈವಿದ್ಯಮಯವಾದ ಭಾರತ ದೇಶದಲ್ಲಿ ಒಂದು ಚುನಾವಣೆ ನಡೆಸಲು ಸಾಧ್ಯವೇ.? ಇದರಿಂದ ಕೇವಲ ಒಂದು ಭಾಷೆಯನ್ನು ಸಮಾಜದಲ್ಲಿ ಹೇರಿದಂತಾಗುತ್ತದೆ. ಪ್ರಾದೇಶಿಕ ಭಾಷೆಗಳು ನಾಶವಾಗುತ್ತವೆ. ಕನ್ನಡ ಭಾಷೆಯ ಸ್ಥಾನಮಾನವನ್ನು ಆಕ್ರಮಿಸುವ ಕೆಲಸಗಳನ್ನು ತಡೆಯಬೇಕಾಗಿದೆ. ದೇಶದಲ್ಲಿ ಒಂದೇ ಚುನಾವಣೆ ನಡೆಸುವುದರಿಂದ ಸ್ಥಳೀಯ ರಾಜಕಾರಣ ದುರ್ಬಲಗೊಳ್ಳುತ್ತದೇ ಜತೆಗೆ ರಾಜಕೀಯ ಪಕ್ಷಗಳಿಗೆ ಪ್ರಚಾರದ ಸ್ವಾತಂತ್ರೃ ಇಲ್ಲದಂತಾಗುತ್ತದೆ ಎಂದು ತಿಳಿಸಿದರು.