ರಾಯಚೂರು: ಭೂ ಸುಧಾರಣಾ ಕಾಯ್ದೆಯ ಪ್ರಕಾರ ಉಳುವವನೇ ಭೂಮಿಯ ಒಡೆಯನಾಗಿರುತ್ತಾನೆ. ಪಹಣಿಯಲ್ಲಿ ವಕ್ಫ್ ಹೆಸರು ಬಂದಾಕ್ಷಣ ಅದು ವಕ್ಫ್ ಆಸ್ತಿಯಾಗುವುದಿಲ್ಲ. ಜಿಲ್ಲಾಧಿಕಾರಿಗಳ ಮೇಲೆ ಈ ವಿಚಾರವನ್ನು ಬಿಡಬೇಕು. ಸೂಕ್ತ ತನಿಖೆಯಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.
ನಗರದ ಖಾಸಗಿ ಹೊಟೆಲ್‌ವೊಂದರಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಮುಸ್ಲಿಂ ಸಮಾಜ, ವಕ್ಕಲಿಗ ಸಮಾಜದ ನಡುವೆ ಅಪಾರವಾದ ಪ್ರೀತಿ ವಿಶ್ವಾಸವಿದೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ದೇವೇಗೌಡರು ಧೃತರಾಷ್ಟ್ರನಂತೆ, ಅವರಿಗೆ ಪುತ್ರವಾತ್ಸಲ್ಯ ಹೆಚ್ಚಿದೆ ಆದ್ದರಿಂದಲೇ ಅವರು ಬಿಜೆಪಿ ಸೇರಬೇಕಾಯಿತು ಎಂದು ವ್ಯಂಗ್ಯವಾಡಿದರು.
ಸಚಿವ ಜಮೀರ್ ಅಹ್ಮದ್ ಖಾನ್ ಕುಮಾರ ಸ್ವಾಮಿಯವರನ್ನು ಕಾಲಿಯಾ(ಕರಿಯಾ) ಎಂದು ಹೇಳಿರುವುದು ಯಾವ ಕಾರಣಕ್ಕೂ ಗೊತ್ತಿಲ್ಲ. ಇದರಿಂದ ವಕ್ಕಲಿಗ ಸಮುದಾಯಕ್ಕೆ ನೋವಾಗಿರಬಹುದು. ಜಮೀರ್ ಪರವಾಗಿ ನಾನು ಕ್ಷಮೆಯಾಚಿಸುವೆ ಎಂದರು.
ದೇವೇಗೌಡರ ಕುಟುಂಬದವರ ಆಶ್ವಾಸನೆಗಳಿಗೆ ಬೆಲೆ ಇಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್ ನಾಯಕರು. ದೇವೇಗೌಡರ ವಯ್ಯಸ್ಸಿಗಾದರೂ ಮರ್ಯಾದೇ ಕೊಡಬೇಕು ಎಂದರು.
ಈಶ್ವರಪ್ಪ ವಿಧವೆಯಂತಾಗಿದ್ದಾರೆ. ಬಿಜೆಪಿ ಎಂಬ ಗಂಡನಿಂದ ದೂರವಾಗಿದ್ದಾರೆ. ವಕ್ಫ್ ಆಸ್ತಿ ವಿಚಾರ ಮುಂದುವರೆದರೇ ಜನರೇ ಕಾಂಗ್ರೆಸ್ಸಿಗರನ್ನು ಹೊಡೆದು ಓಡಿಸುತ್ತಾರೆ ಎಂದು ಹೇಳುತ್ತಿರುವುದು ಹಿಂಸೆಗೆ ಪ್ರಚೋಧನೆ ಕೊಟ್ಟಂತೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಅವರ ಮೇಲೆ ಕೇಸ್ ಹಾಕಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದರು.
ರಾಜ್ಯದಲ್ಲಿ ರಾಜಕೀಯ ಸಂಸ್ಕೃತಿ ಕೆಟ್ಟು ಹೋಗಿದೆ. ಬಂದ ಜನರ ಮುಂದೆ ಯಾವುದೇ ರಾಜಕಾರಣಿ ಭಾಷಣ ಮಾಡುತ್ತಿಲ್ಲ ಬದಲಾಗಿ ತಂದ ಜನರ ಮುಂದೆ ಭಾಷಣ ಮಾಡುತ್ತಾರೆ. ಜನರನ್ನು ದುಡ್ಡು ಕೊಟ್ಟು ಕರೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಮುಡಾ ವಿಚಾರ ಹಗರಣವಲ್ಲ ಅದೊಂದು ಪ್ರಕರಣ, ಬಿಜೆಪಿ ಸಮಯದಲ್ಲಿಯೇ ಸೈಟ್‌ಗಳನ್ನು ಹಂಚಲಾಗಿತ್ತು. ಜತೆಗೆ ಕೋವಿಡ್ ಹಗರಣಗಳೂ ಕೂಡ ಬಿಜೆಪಿ ಸಂದರ್ಭದಲ್ಲಿ ಆದಂತದ್ದು, ಸರ್ಕಾರ ಈ ಬಗ್ಗೆ ಮುಂಚೆಯೇ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ತಿಳಿಸಿದರು.