ನ್ಯೂಸ್

ರಾಹುಲ್​- ಪ್ರಿಯಾಂಕಾ ಭೇಟಿ ಮಾಡಿದ ಪೈಲಟ್​

suchetana

ನವದೆಹಲಿ: ಪಂಜಾಬ್​ನಲ್ಲಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಬೆನ್ನಲ್ಲೇ ರಾಜಸ್ಥಾನದಲ್ಲಿ ಹಿರಿಯ ನಾಯಕ, ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಕುಚಿರ್ ಅಲುಗಾಡಿಸುವ ಕೆಲಸ ಮತ್ತೆ ಶುರುವಾಗಿದೆ. ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತ್ತು ಸೋದರಿ ಪ್ರಿಯಾಂಕಾ ವಾದ್ರಾರನ್ನು ಭೇಟಿ ಮಾಡಿದ್ದ ರಾಜಸ್ಥಾನ ಕಾಂಗ್ರೆಸ್​ ಮುಖಂಡ ಸಚಿನ್​ ಪೈಲಟ್​, ಶುಕ್ರವಾರದಂದು ಮತ್ತೊಮ್ಮೆ ಇಬ್ಬರನ್ನೂ ಭೇಟಿ ಮಾಡಿ, 45 ನಿಮಿಷಗಳ ಕಾಲ ಮಾತುಕತ ನಡೆಸಿದ್ದಾರೆ.

ರಾಜ್ಯದಲ್ಲಿ ಹೊಸ ನಾಯಕತ್ವಕ್ಕೆ ಅವಕಾಶ ನೀಡಬೇಕು ಎಂಬ ಒತ್ತಡ ಮೊದಲಿನಿಂದ ಇದ್ದರೂ, ಈ ಬಾರಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ರಾಹುಲ್​&ಪ್ರಿಯಾಂಕಾರನ್ನು ಪೈಲಟ್​ ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ. ಸಂಪುಟ ವಿಸ್ತರಣೆ ವೇಳೆ ತಮ್ಮ ಬೆಂಬಲಿಗ ಶಾಸಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪೈಲಟ್​ ಹೈಕಮಾಂಡ್​ ಮೇಲೆ ಒತ್ತಡ ಹೇರುತ್ತಿರುವುದರಿಂದಲೇ ಸಿಎಂ ಅಶೋಕ್​ ಗೆಹ್ಲೋಟ್​ ವಿಸ್ತರಣೆ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಇದ್ದಾರೆ.

ಏತನ್ಮಧ್ಯೆ, ಮುಂದಿನ ವರ್ಷ ಗುಜರಾತ್​ ಚುನಾವಣೆ ನಡೆಯಲಿದ್ದು ರಾಜ್ಯ ಕಾಂಗ್ರೆಸ್​ ಉಸ್ತುವಾರಿಯನ್ನಾಗಿ ಸಚಿನರನ್ನು ಗುಜರಾತ್​ಗೆ ಕಳುಹಿಸಲು ರಾಹುಲ್​ ಉತ್ಸುಕರಾಗಿದ್ದಾರೆ. ಆದರೆ, ಸಂಪುಟ ವಿಸ್ತರಣೆಯಲ್ಲಿ ಬೆಂಬಲಿಗರಿಗೆ ಮಹತ್ವ ಸಿಕ್ಕರೆ ಮಾತ್ರ ಜವಾಬ್ದಾರಿ ವಹಿಸಿಕೊಳ್ಳುವೆ ಎಂದು ಪೈಲಟ್​ ತಿಳಿಸಿದ್ದಾರೆ.