Supreme Court: ದೇಶದಲ್ಲಿ ಲೋಕಸಭೆ ಸೇರಿ ಹಲವು ವಿಧಾನಸಭೆ ಚುನಾವಣೆಗಳಲ್ಲಿ ಮತಗಳ್ಳತನ ಮಾಡಲಾಗಿದೆ. ಅದಕ್ಕೆ ಚುನಾವಣಾ ಆಯೋಗ ಕುಮ್ಮಕ್ಕು ಕೊಟ್ಟಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ(ಅ. 13) ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನ್ಯಾ. ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ದ್ವಿಸದಸ್ಯ ಪೀಠವು, ಇದನ್ನು ಚುನಾವಣಾ ಆಯೋಗದ ಮುಂದೆ ಪರಿಹರಿಸಿಕೊಳ್ಳಿ, ನ್ಯಾಯಾಲಯದಲ್ಲಿ ಅಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತು. ಅರ್ಜಿದಾರರ ಪರ ವಕೀಲರು ಈಗಾಗಲೇ ಆಯೋಗದ ಮುಂದೆ ಈ ವಿಷಯದ ಕುರಿತು ಅರ್ಜಿ ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ ಎಂಬುದನ್ನು ಪೀಠದ ಗಮನಕ್ಕೆ ತಂದರು.
ಮುಂದುವರೆದು ಆಯೋಗಕ್ಕೆ ಈ ಬಗ್ಗೆ ಕ್ರಮಕೈಗೊಳ್ಳುವ ಬಗ್ಗೆ ಕಾಲಮಿತಿ ನಿಗದಿಗೊಳಿಸುವಂತೆ ಕೋರಿದ್ರು. ಆದರೆ ನ್ಯಾಯಪೀಠವು ಅನ್ನು ಪರಿಗಣಿಸಲಿಲ್ಲ. ಈ ಕುರಿತು ನಿರ್ದೇಶನ ನೀಡಲು ಬರಲ್ಲ, ಅಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಹೇಳಿತು ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ರೋಹಿತ್ ಪಾಂಡೆ ಎಂಬುವರು ಸಲ್ಲಿಸಿದ್ದ ಅರ್ಜಿಯಲ್ಲಿ, ಮತದಾರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿವೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸುವಲ್ಲಿ ಸಂವಿಧಾನಿಕ ಸಂಸ್ಥೆ ರಾಜಿಯಾಗಿದೆ. ಬೆಂಗಳೂರು ಕೇಂದ್ರ ಸಂಸದೀಯ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ನಕಲಿ, ಅಮಾನ್ಯ ಮತ್ತು ಕಾಲ್ಪನಿಕ ನಮೂದುಗಳು ಪತ್ತೆಯಾಗಿದ್ದು, ಒಬ್ಬ ವ್ಯಕ್ತಿ, ಒಂದು ಮತ ಎಂಬ ತತ್ವವನ್ನು ದುರ್ಬಲಗೊಳಿಸಲಾಗಿದೆ ಎಂದು ಉಲ್ಲೇಖಿಸಿದ್ದರು.
ಹಲವಾರು ಮತದಾರರು ಒಂದೇ EPIC ಸಂಖ್ಯೆಯಡಿಯಲ್ಲಿ ಬಹು ಕ್ಷೇತ್ರಗಳಲ್ಲಿ ನೋಂದಾಯಿಸಿಕೊಂಡಿರುವುದು ಕಂಡುಬಂದಿದೆ. ಕೆಲವು ವ್ಯಕ್ತಿಗಳು ಒಂದೇ ಕ್ಷೇತ್ರದಲ್ಲಿ ವಿಭಿನ್ನ ಗುರುತಿನ ಸಂಖ್ಯೆಗಳೊಂದಿಗೆ ಒಂದಕ್ಕಿಂತ ಹೆಚ್ಚು ಬಾರಿ ಕಾಣಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. (ಏಜೆನ್ಸೀಸ್)