ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ 'ಆಬ್ಸ್' ಫೋಟೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಫೆ.24ರಂದು ಸಮುದ್ರದಲ್ಲಿ ಈಜುವ ಮೂಲಕ ರಾಗಾ ಭಾರಿ ಸುದ್ದಿಯಾಗಿದ್ದರು. ಅದೇ ವೇಳೆ ತೆಗೆದಿರುವ ರಾಹುಲ್ ಫೋಟೋ ಇದೀಗ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ವೈರಲ್ ಆಗಿರುವ ಫೋಟೋದಲ್ಲಿ ರಾಹುಲ್ ಅವರ "ಸಿಕ್ಸ್ಪ್ಯಾಕ್ಟ್ ಆ್ಯಬ್ಸ್" ಒದ್ದೆಯಾದ ಟೀ-ಶರ್ಟ್ ಮೇಲೆಯೇ ಮಂಕಾಗಿ ಕಾಣಿಸುತ್ತದೆ. ಇದೀಗ ಕಾಂಗ್ರೆಸ್ ನಾಯಕನಿಗೆ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಲಾಕ್ಡೌನ್ ಸಮಯದಲ್ಲಿ ಅನೇಕರು ತೂಕ ಹೆಚ್ಚಿಸಿಕೊಂಡಿದ್ದರೆ, ರಾಹುಲ್ ತಮ್ಮ ಜಿಮ್ ಅವಧಿಯನ್ನು ಮಿಸ್ ಮಾಡೇ ಇಲ್ಲ ಎಂದು ಪ್ರಶಂಸಿಸಿದ್ದಾರೆ.
ಅನೇಕರು ರಾಹುಲ್ ಬಳಿ ಫಿಟ್ನೆಸ್ ಸಲಹೆಯನ್ನು ಕೇಳಿದ್ದಾರೆ. ಇನ್ನು ಕೆಲವರು ರಾಗಾ ದೇಶದ ಅತ್ಯಂತ ಫಿಟ್ ನಾಯಕನೆಂದು ಕೊಂಡಾಡಿದ್ದಾರೆ. ರಾಜಕೀಯ ವ್ಯಕ್ತಿಗಳೆಂದರೆ ಬಹುತೇಕರು ಹೊಟ್ಟೆ ಬಿಟ್ಟುಕೊಂಡು ಇರುತ್ತಾರೆ. ಅವರಿಗೆಲ್ಲ ರಾಹುಲ್ ಮಾದರಿ ಎಂದಿದ್ದಾರೆ.
ಕಾಂಗ್ರೆಸ್ ಮಾಜಿ ಸಂಸದ ಮತ್ತು ಸಚಿವ ರಾಜೀವ್ ಶುಕ್ಲಾ ಟ್ವೀಟ್ ಮಾಡಿ ರಾಹುಲ್ ಆ್ಯಬ್ಸ್ ಹೊಂದಿದ್ದಾರೆಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಗಾ ಆ್ಯಬ್ಸ್ ಬಾಕ್ಸರ್ ಆ್ಯಬ್ಸ್ ಎಂದು ಬಾಕ್ಸಿಂಗ್ ಚಾಂಪಿಯನ್ ವಿಜಯೇಂದರ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗೆ ಅನೇಕರು ರಾಹುಲ್ ಫಿಟ್ನೆಸ್ ನೋಡಿ ಫಿದಾ ಆಗಿದ್ದು, ತಮ್ಮದೇ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ರಾಹುಲ್ ಫೆ. 24ರಂದು ಕೇರಳದ ಕೊಲ್ಲಂನಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದರು. ಎರಡು ದಿನಗಳ ಪ್ರವಾಸದ ನಡುವೆಯೇ ಮೀನುಗಾರರ ಜತೆ ಉತ್ತಮ ಕ್ಷಣಗಳನ್ನು ಕಳೆದ ರಾಗಾ ಅವರೊಂದಿಗೆ ಸಮುದ್ರಕ್ಕೆ ಜಿಗಿದು ಈಜುವ ಮೂಲಕ ಎಲ್ಲರ ಹುಬ್ಬೇರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಭಾರಿ ವೈರಲ್ ಆಗಿ, ತುಂಬಾ ಮೆಚ್ಚುಗೆ ವ್ಯಕ್ತವಾಯಿತು. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ