ನವದೆಹಲಿ: ಕರೊನಾ ಸಮಸ್ಯೆ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ವೈರಸ್ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಲಾಕ್ಡೌನ್ ಘೋಷಿಸಿದ್ದಾರೆ. ಆದರೆ ಈ ಲಾಕ್ಡೌನ್ ಕೂಡ ಅಷ್ಟು ಸುಲಭದ್ದಲ್ಲ ಎಂಬುದು ಕಳೆದ 36 ಗಂಟೆಯಲ್ಲೇ ಅರ್ಥವಾಗಿ ಹೋಗಿದೆ.
ಜನಸಾಮಾನ್ಯರ ಜೀವನ ಹೇಗೆ ಎಂಬ ಆತಂಕದಲ್ಲಿದ್ದವರಿಗೆ ಇಂದು ಕೇಂದ್ರ ಸರ್ಕಾರ ಸ್ವಲ್ಪ ಮಟ್ಟಿನ ನಿರಾಳತೆ ನೀಡಿದೆ. ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ಬಡವರು, ವಲಸಿಗರು, ಮಹಿಳೆಯರು ಮತ್ತು ಇತರೆ ಶ್ರಮಿಕ ವರ್ಗದವರು, ಕರೊನಾ ವಿರುದ್ಧ ಹೋರಾಡುತ್ತಿರುವವರ ಜೀವನ ನಿರ್ವಹಣೆಗಾಗಿ ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಘೋಷಿಸಿದೆ.
ಇಂದು ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಜೀವನ ನಿರ್ವಹಣೆ ಮಾಡಲು ಕೇಂದ್ರದಿಂದ ಏನೆಲ್ಲ ನೆರವು ಸಿಗಲಿದೆ ಎಂಬುದನ್ನು ವಿವರಿಸಿದ್ದಾರೆ.
ನಿರ್ಮಲಾ ಸುದ್ದಿಗೋಷ್ಠಿಯ ಬಳಿ ಕೆಲವೇ ಕ್ಷಣಗಳಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.
ಜನಸಾಮಾನ್ಯರ ಜೀವನಕ್ಕಾಗಿ ಸರ್ಕಾರ ಘೋಷಿಸಿದ ಆರ್ಥಿಕ ನೆರವಿನ ಪ್ಯಾಕೇಜ್ ಸ್ವಾಗತಾರ್ಹ. ಈ ಮೂಲಕ ಸರ್ಕಾರ ಸರಿಯಾದ ದಿಕ್ಕಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಿದೆ. ಲಾಕ್ಡೌನ್ನಿಂದ ತೊಂದರೆಗೆ ಒಳಗಾಗಿರುವ ರೈತರು, ದಿನಗೂಲಿ ಕೆಲಸಗಾರರು, ಕಾರ್ಮಿಕರು, ಮಹಿಳೆಯರು ಮತ್ತು ವೃದ್ಧರ ಹೊಣೆಯನ್ನು, ಅವರ ಸಾಲದ ಹೊರೆಯನ್ನು ಈಗ ಭಾರತ ಹೊತ್ತುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಹೊಗಳಿದ್ದಾರೆ.(ಏಜೆನ್ಸೀಸ್)