ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ 
ನ್ಯೂಸ್

ಕೊನೆಗೂ ಸರ್ಕಾರಿ ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ; ಸಂಸದ ಸ್ಥಾನದಿಂದ ಅನರ್ಹಗೊಂಡ ತಿಂಗಳ ಬಳಿಕ ತೆರವು

ನವದೆಹಲಿ: ಮೋದಿ ಸರ್​ನೇಮ್ ವಿಚಾರವಾಗಿ ತಪ್ಪಿತಸ್ಥ ಅನಿಸಿಕೊಂಡು ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ, ಕೊನೆಗೂ ಅದಾಗಿ ಒಂದು ತಿಂಗಳ ಬಳಿಕ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ. ಶನಿವಾರ ಅವರು ತಮ್ಮ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಿದ್ದಾರೆ.

ತಮ್ಮ ಬಂಗಲೆಯಲ್ಲಿ ಇದ್ದ ವಸ್ತುಗಳನ್ನು ಅವರು 10 ಜನಪಥ್​ನಲ್ಲಿರುವ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸಕ್ಕೆ ಸ್ಥಳಾಂತರಗೊಳಿಸಿದ್ದಾರೆ. ಇಂದೇ ಅವರು ತಮ್ಮ ಬಂಗಲೆಯ ಕೀಯನ್ನು ಲೋಕಸಭಾ ಸಚಿವಾಲಯಕ್ಕೆ ಒಪ್ಪಿಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಮೋದಿ ಸರ್​​ನೇಮ್ ವಿಚಾರವಾಗಿ ಸೂರತ್ ನ್ಯಾಯಾಲಯ ಶಿಕ್ಷೆ ವಿಧಿಸುತ್ತಿದ್ದಂತೆ ಅವರನ್ನು ವಯನಾಡ್ ಸಂಸದ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಅಲ್ಲದೆ ಏ. 22ರಂದೇ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಸದ್ಯ ಅವರು ತಮ್ಮ ವಾಸ್ತವ್ಯವನ್ನೂ ತಾಯಿಯ ಅಧಿಕೃತ ನಿವಾಸಕ್ಕೆ ಬದಲಿಸಿದ್ದಾರೆ ಎಂದು ಪಿಟಿಐ ತಿಳಿಸಿದೆ.