ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಡಾ ಪ್ರಕರಣದಲ್ಲಿ ತನಿಖೆಗೆ ನ್ಯಾಯಾಲಯ ಆದೇಶ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕರೆ ಮಾಡಿ ಮಾತನಾಡಿ, ಇಡೀ ಕಾಂಗ್ರೆಸ್ ಪಕ್ಷ ನಿಮ್ಮ ಬೆನ್ನಿಗಿದೆ ಇನ್ನು ಮುಂದೆ ಮತ್ತಷ್ಟು ಸ್ಟ್ರಾಂಗ್ ಆಗುವಂತೆ ಸಲಹೆ ನೀಡಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದಲ್ಲಿರುವ ರಾಹುಲ್ ಗುರುವಾರ ಬೆಳಗ್ಗೆ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಸುಮಾರು 20 ನಿಮಿಷ ಮಾತನಾಡಿದ್ದಾರೆ. ರಾಜ್ಯದಲ್ಲಿ ನಿಮ್ಮನ್ನು ಬದಲಾವಣೆ ಮಾಡುವ ಯಾವುದೇ ಉದ್ದೇಶ ವರಿಷ್ಠರ ಮುಂದಿಲ್ಲ. ಕರ್ನಾಟಕದಲ್ಲಿ ನೀವೆ ನಮ್ಮ ಶಕ್ತಿ. ಆದ್ದರಿಂದ ನೀವು ಎಲ್ಲಿಯೂ ಕಳೆಗುಂದ ಬೇಡಿ. ನಿಮ್ಮ ಕಾನೂನು ಹೋರಾಟಕ್ಕೆ ನಮ್ಮ ಬೆಂಬಲ ಇರುತ್ತದೆ. ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಭಾಷಣಕ್ಕೆ ನೀವು ರಾಜಕೀಯ ವಾಗಿಯೇ ತಿರುಗೇಟು ನೀಡಿ ಎಂಬ ನಿರ್ದೇಶನ ನೀಡಿದ್ದಾರೆ.
ಕೂಡಲೇ ರಾಜ್ಯ ಪ್ರವಾಸ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಇಮೇಜ್ ಹೆಚ್ಚಿಸಿ, ನಿಮ್ಮ ನೈತಿಕ ಸ್ಥೈರ್ಯ ಎಲ್ಲಿಯೂ ಕುಸಿಯದಂತೆ ನೋಡಿಕೊಳ್ಳಿ. ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಹೋಗದಂತೆ ಎಚ್ಚರಿಕೆ ವಹಿಸಿ ಎಂಬ ಸಲಹೆ ನೀಡಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಬಿಜೆಪಿ ಹಾಗೂ ಜೆಡಿಎಸ್ ನಿಮ್ಮ ವಿರುದ್ಧ ಕುತಂತ್ರ ಮಾಡಿ ಷಡ್ಯಂತ್ರ ಮಾಡಿವೆ, ರಾಜಭವನವನ್ನು ದುರುಪಯೋಗ ಮಾಡಿ ಕೊಂಡಿವೆ. ಅದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿ ಎಂದು ರಾಹುಲ್ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ನಿಗದಿಯಾದ ಸಭೆ, ಸಮಾರಂಭಗಳನ್ನು ಏಕಾಏಕಿ ರದ್ದು ಮಾಡುವ ಅಥವಾ ಮುಂದೂಡುವ ಪ್ರಯತ್ನ ಮಾಡಬೇಡಿ, ಅದು ಸಾರ್ವಜನಿಕವಾಗಿ ತಪು್ಪ ಅಭಿಪ್ರಾಯಕ್ಕೆ ಕಾರಣವಾಗುತ್ತದೆ. ಇನ್ನು ಮುಂದೆ ಸಭೆ ಸಮಾರಂಭಗಳನ್ನು ಹೆಚ್ಚು ಮಾಡಿ. ಅಭಿವೃದ್ಧಿ ಕಾರ್ಯಗಳು, ರಾಜಕೀಯ ಕಾರ್ಯಕ್ರಮಗಳನ್ನು ಜಾಸ್ತಿಯಾಗುವಂತೆ ಪಕ್ಷದೊಂದಿಗೆ ಸಹಯೋಗದಲ್ಲಿ ಮಾಡುವ ಕಡೆ ಗಮನ ಹರಿಸಿ ಎಂದು ತಿಳಿಸಿದರೆನ್ನಲಾಗಿದೆ.
ರಾಹುಲ್ ಗಾಂಧಿ ಅವರ ಕರೆಯ ನಂತರ ಸಿದ್ದರಾಮಯ್ಯ ಅವರು ಸಚಿವರಾದ ಡಾ. ಜಿ. ಪರಮೇಶ್ವರ, ಎಚ್.ಕೆ. ಪಾಟೀಲ್, ಡಾ. ಮಹದೇವಪ್ಪ ಸೇರಿ ಕೆಲವರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಸಮಾಲೋಚನೆ ಮಾಡಿದ್ದಾರೆ.
ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಸೆ.27) ನಗರಕ್ಕೆ ಆಗಮಿಸುತ್ತಿದ್ದು, ಮೂರು ದಿನಗಳ ಕಾಲ ಇಲ್ಲೇ ವಾಸ್ತವ್ಯ ಹೂಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿರುವ ಬೆನ್ನಲ್ಲೇ ಮೈಸೂರಿನ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ, ಸಿಎಂ ಸೆ.27ರಂದು ನಗರಕ್ಕೆ ಆಗಮಿಸುತ್ತಿರುವುದು ವಿಶೇಷ.
ಜನಪ್ರತಿನಿಧಿಗಳ ನ್ಯಾಯಾಲಯ ಸಿಆರ್ಪಿಸಿಯಡಿ ತನಿಖೆಗೆ ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸದೇ ತನಿಖೆಯನ್ನು ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ರಾಹುಲ್ ಗಾಂಧಿಯೊಂದಿಗೆ ದೂರವಾಣಿ ಸಮಾಲೋಚನೆ, ಕೇರಳದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರೊಂದಿಗೆ ಚರ್ಚೆ ಹಾಗೂ ಆಪ್ತ ಸಚಿವರೊಂದಿಗೆ ಮಾತುಕತೆಯ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ. ತನಿಖೆಯನ್ನು ಎದುರಿಸುತ್ತೇನೆ ಎಂಬ ಮಾತನ್ನು ಹೇಳಿದ್ದ ಸಿದ್ದರಾಮಯ್ಯ ಈಗ ನ್ಯಾಯಾಲಯದ ಆದೇಶದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದರೆ ತಪು್ಪ ಅಭಿಪ್ರಾಯ ಮೂಡಿದಂತಾಗುತ್ತದೆ ಎಂಬ ಕಾರಣಕ್ಕೆ ತನಿಖೆಯನ್ನೇ ಎದುರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ಬಿಎನ್ಎಸ್ಎಸ್ ಹೊರತು ಸಿಆರ್ಪಿಸಿಯಡಿ ತನಿಖೆಗೆ ಆದೇಶಿಸಿದೆ. ಅದರಲ್ಲಿನ ಗೊಂದಲಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಉಚ್ಛ ನ್ಯಾಯಾಲಯದಲ್ಲಿ ಸ್ಪಷ್ಟನೆ ಕೋರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ನಾನು ರಾಜೀನಾಮೆ ಕೊಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜಾಮೀನಿನ ಮೇಲಿದ್ದಾರೆ. ಅವರು ಯಾವ ಸರ್ಕಾರದಲ್ಲಿ ಇರುವುದು? ಯಾರ ಮಂತ್ರಿ ಮಂಡಲದಲ್ಲಿದ್ದಾರೆ? ಯಾವ ಪಕ್ಷದ ನೇತೃತ್ವದ ಸರ್ಕಾರ ಎಂದು ಪ್ರಶ್ನಿಸಿದರು. ಗುಜರಾತ್ನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ರಾಜೀನಾಮೆ ಕೊಟ್ಟಿದ್ದರೇ? ನಾನು ಏನೂ ತಪು್ಪ ಮಾಡಿಲ್ಲ. ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದರು.
ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶದ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಸಣ್ಣ ಕಿಡಿ ಹೊತ್ತಿದೆ. ಸಿದ್ದರಾಮಯ್ಯ ಸ್ವಯಂಪ್ರೇರಿತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ ಆಗ್ರಹಿಸಿದ್ದಾರೆ. ಅವರ ಈ ಮಾತು ಸಚಿವ ಸಂಪುಟ ಸದಸ್ಯರನ್ನು ಕೆರಳಿಸಿದೆ. ಕೋಳಿವಾಡ ಅಭಿಪ್ರಾಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಂತೂ ಕೋಳಿವಾಡಗೆ ವಯಸ್ಸಾಗಿದೆ, ತಲೆ ಕೆಟ್ಟಿದೆ ಎಂದು ಆಕ್ರೋಶ ಹೊರಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಕೋಳಿವಾಡ, ಸಿಎಂ ರಾಜೀನಾಮೆ ಕೊಡಬೇಕೋ ಬಿಡಬೇಕೋ ಅವರಿಗೆ ಸೇರಿದ್ದು. ನನ್ನ ಅಭಿಪ್ರಾಯ ನಾನು ಹೇಳುತ್ತಿದ್ದೇನೆ. ನಾನು ಕೆಪಿಸಿಸಿ ಶಿಸ್ತು ಸಮಿತಿ ಸದಸ್ಯನಾಗಿ ಮಾತನ್ನಾಡುತ್ತಿಲ್ಲ. ಪಕ್ಷದಲ್ಲಿ ಹೇಳಲು ವೇದಿಕೆಯೇ ಇಲ್ಲ, ಹಾಗಾಗಿ ಇಲ್ಲಿ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಬೇಕು ಎಂದರು. ನನ್ನ ಹೇಳಿಕೆ ಪಕ್ಷ ವಿರೋಧಿ ಚಟುವಟಿಕೆ ಅನ್ನಿಸಿದರೆ ನೋಟಿಸ್ ಕೊಡಲಿ. ಹೈಕಮಾಂಡ್ ನೋಟಿಸ್ ನೀಡಿದರೂ ಉತ್ತರ ನೀಡುತ್ತೇನೆ. ಸಿದ್ದರಾಮಯ್ಯಗಿಂತಲೂ ನಾನು ಕಾಂಗ್ರೆಸ್ನಲ್ಲಿ ಸೀನಿಯರ್. ನಾನು ಎಂದೂ ಪಕ್ಷ ಬಿಟ್ಟು ಹೋದವನಲ್ಲ. ಬೇರೆ ಪಕ್ಷದಿಂದಲೂ ಬಂದವನಲ್ಲ ಎಂದು ಗುಡುಗಿದರು.
ಕೋರ್ಟ್ ತೀರ್ಪಿನ ಕಾರಣ ಸಿಎಂ ರಾಜೀನಾಮೆ ನೀಡಬೇಕು. ಆರೋಪ ಮುಕ್ತರಾದ ಬಳಿಕ ಮತ್ತೆ ಸಿಎಂ ಆಗಲಿ. ಅಲ್ಲಿಯವರೆಗೂ ರಾಜೀನಾಮೆ ನೀಡಬೇಕು. ಇದು ನನ್ನ ಅಭಿಪ್ರಾಯ ಅಷ್ಟೇ ಎಂದರು.
ಸಚಿವರ ಆಕ್ರೋಶ: ಸಿಎಂ ರಾಜೀನಾಮೆ ಕೇಳಲು ಕೋಳಿವಾಡ ಯಾರು? ನಮ್ಮದು ಹೈಕಮಾಂಡ್ ಪಕ್ಷ. ನಮ್ಮ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆ ಹೇಳಬೇಕು. ಕೋಳಿವಾಡರದ್ದು ವೈಯಕ್ತಿಕ ಹೇಳಿಕೆ ಎಂದು ಸಚಿವ ಜಮೀರ್ ಅಹ್ಮದ್ ಕುಟುಕಿದ್ದಾರೆ. ಕೋಳಿವಾಡಗೆ ವಯಸ್ಸೆಷ್ಟು? ಬೆಳಗ್ಗೆ ಇರುವ ಜ್ಞಾಪಕ ಶಕ್ತಿ ಮಧ್ಯಾಹ್ನ ಇರಲ್ಲ. ಅವರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ಅಗತ್ಯವಿಲ್ಲ. ಹಳ್ಳಿಯಿಂದ ದೆಹಲಿವರೆಗೂ ಕಾಂಗ್ರೆಸ್ ಸಿದ್ದರಾಮಯ್ಯ ಪರವಾಗಿ ನಿಲ್ಲಲಿದೆ. ಪಕ್ಷದ ಅಧ್ಯಕ್ಷನಾಗಿ ನಾನು ಈ ಮಾತು ಹೇಳುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ನಾನು, ಇಲ್ಲಿ ನಾನೇ ಹೇಳುತ್ತಿದ್ದೇನೆಲ್ಲ. ಅವರ ರಾಜೀನಾಮೆ ಪ್ರಶ್ನೆಯೇ ಉದ್ಭವ ಆಗುವುದಿಲ್ಲ ಎಂದು ಹೇಳಿದರು.
ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಆರ್ಪಿಸಿ ಅಡಿ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಬಿಎನ್ಎಸ್ಎಸ್ ನಿಯಮಗಳ ಅಡಿ ಪ್ರಕರಣ ದಾಖಲಿಸಲು ಆದೇಶಿಸಿದ್ದರೆ ಸೂಕ್ತವಾಗುತ್ತಿತ್ತು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳ ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಸಿಆರ್ಪಿಸಿ 156/3ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಆದೇಶಿಸಿದೆ. ಆದರೆ ಈಗ ಸಿಆರ್ಪಿಸಿ ಅಸ್ತಿತ್ವದಲ್ಲಿ ಇಲ್ಲ. ಬಿಎನ್ಎಸ್ಎಸ್ ನಿಯಮಗಳು 2024ರ ಜುಲೈ 1 ರಿಂದಲೂ ಚಾಲ್ತಿಯಲ್ಲಿದೆ. ಅದರ ಅಡಿ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ಮುಂದುವರಿಸಲು ಅವಕಾಶವಿದೆ ಎಂದರು.
ಹೈಕೋರ್ಟ್ನ ತೀರ್ಪನ್ನು ಪೊಲಿಟಿಕಲ್ ಜಡ್ಜ್ಮೆಂಟ್ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಬುಧವಾರ ಪ್ರತಿಕ್ರಿಯೆ ನೀಡುವ ವೇಳೆ, ಇದೆಲ್ಲ ರಾಜಕೀಯ, ರಾಜಕೀಯ ಜಡ್ಜ್ಮೆಂಟ್ ಎಂದು ವಿಶ್ಲೇಷಿಸಿದ್ದರು. ಇದಕ್ಕೆ ದೂರುದಾರ ಅಬ್ರಹಾಂ ಅಸಮಾಧಾನ ವ್ಯಕ್ತಪಡಿಸಿದ್ದು, ನಾವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಬೆಳವಣಿಗೆಯಾಗುತ್ತಿದ್ದಂತೆ ಜಮೀರ್, ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವ ಇದೆ. ಬಾಯ್ತಪ್ಪಿನಿಂದ ಈ ರೀತಿ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಬೆಂಗಳೂರು: ಹೈಕೋರ್ಟ್ ತೀರ್ಪನ್ನು ದೆಹಲಿಯಲ್ಲಿ ಹಿರಿಯ ವಕೀಲರಿಂದ ಕಾಂಗ್ರೆಸ್ ವಿಶ್ಲೇಷಣೆಗೊಳಪಡಿಸಿದೆ. ಏಕಸದಸ್ಯ ಪೀಠ ಹೇಳಿದ್ದೇ ಅಂತಿಮ ಅಲ್ಲ, ಕಲ್ಲಿನ ಮೇಲೆ ಕೆತ್ತಿದಂತೆ ಇದನ್ನು ಸ್ವೀಕಾರ ಮಾಡಲು ಸಾಧ್ಯವಿಲ್ಲ. ಸುಪ್ರಿಂಕೋರ್ಟ್ ತೀರ್ಪು ಮಾತ್ರ ಕಾನೂನು ಆಗುತ್ತದೆ. ತೀರ್ಪಿನಲ್ಲಿ ಕಾನೂನಾತ್ಮಕ ಲೋಪದೋಷಗಳಿವೆ ಎಂಬುದು ಗೊತ್ತಾಗಿದೆ. ನ್ಯಾಯಮೂರ್ತಿಗಳು ಸಿಎಂ ಪಾತ್ರ ಏನು ಎಂದು ಕೇಳಿದ್ದರು. ಅದಕ್ಕೆ ತೀರ್ಪಿನಲ್ಲೂ ಉತ್ತರವಿಲ್ಲ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಹೇಳಿದರು.