ನ್ಯೂಸ್

ವಿಧಾನಸಭೆ ಚುನಾವಣೆ: ಆಗಸ್ಟ್​ 21-22ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಖರ್ಗೆ, ರಾಹುಲ್ ಗಾಂಧಿ ಭೇಟಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣಾ ದಿನಾಂಕಗಳ ಘೋಷಣೆಯಾಗಿದ್ದು, ಅದರ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಪ್ರಾದೇಶಿಕ ಪಕ್ಷಗಳು ಮಾತ್ರವಲ್ಲದೆ ರಾಷ್ಟ್ರೀಯ ಪಕ್ಷಗಳೂ ರಣತಂತ್ರ ಹೆಣೆಯುತ್ತಿವೆ. ಇದರಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಗಸ್ಟ್ 21 ಮತ್ತು 22 ರಂದು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.

ಜಮ್ಮು ಮತ್ತು ಶ್ರೀನಗರದಲ್ಲಿ ಪಕ್ಷದ ಪ್ರಮುಖ ನಾಯಕರನ್ನು ಭೇಟಿಯಾಗಲಿದ್ದು. ಈ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಸಾಧ್ಯತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅವರೊಂದಿಗೆ ಚರ್ಚಿಸಲಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಬುಧವಾರ ಮಧ್ಯಾಹ್ನ ಜಮ್ಮು ತಲುಪಲಿದ್ದಾರೆ. ಬಳಿಕ ಪಕ್ಷದ ವರಿಷ್ಠರೊಂದಿಗೆ ಸಭೆ ನಡೆಸಲಿದ್ದಾರೆ ಎಂದಿದ್ದಾರೆ.

ಇನ್ನೊಂದೆಡೆ ಹರಿಯಾಣ, ಮಹಾರಾಷ್ಟ್ರ, ಜಮ್ಮು ಕಾಶ್ಮೀರ ಮತ್ತು ಜಾರ್ಖಂಡ್ ನಾಲ್ಕು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ನವದೆಹಲಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು ಹಾಗೂ ಸ್ಕ್ರೀನಿಂಗ್ ಕಮಿಟಿ ಸದಸ್ಯರೊಂದಿಗೆ ಖರ್ಗೆ ಹಾಗೂ ರಾಹುಲ್ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಮೂರು ಹಂತಗಳಲ್ಲಿ 90 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ: ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನಕ್ಕೆ ಅಧಿಸೂಚನೆಯನ್ನು ಹೊರಡಿಸಲಿದೆ. ಕಳೆದ ವಾರ ಚುನಾವಣಾ ದಿನಾಂಕಗಳನ್ನು ಘೋಷಿಸಿದ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಚುನಾವಣಾ ಪ್ರಕ್ರಿಯೆಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಬಾರಿಗೆ 2014 ರಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಮೂರು ಹಂತಗಳಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು 90 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್ 4 ರಂದು ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.

ಬಿಜೆಪಿ ಏಕಾಂಗಿಯಗಿ ಸ್ಪರ್ಧಿಸುವ ಸಾಧ್ಯತೆ: ಇನ್ನೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯು ಮುಂದಿನ ವಾರದಿಂದ ಪ್ರಚಾರ ಆರಂಭಿಸಲಿದೆ. ಪ್ರಧಾನಿ ಮೋದಿ, ಅಮಿತ್ ಷಾ ನೇತೃತ್ವದಲ್ಲಿ ಪ್ರಚಾರ ಆರಂಭಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕೇಂದ್ರಾಡಳಿತ ಪ್ರದೇಶದಾದ್ಯಂತ ರ್ಯಾಲಿಗಳನ್ನು ನಡೆಸಲಿದ್ದಾರೆ. ಬಿಜೆಪಿಯು ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರೀಕ್ಷೆಯಿದೆ, ಕಾಶ್ಮೀರ ಕಣಿವೆಯಲ್ಲಿ ಸ್ವತಂತ್ರ ಮತ್ತು ಸಣ್ಣ ಪಕ್ಷಗಳೊಂದಿಗೆ ಸೀಟು ಹೊಂದಾಣಿಕೆಗಳನ್ನು ಮಾತ್ರ ಆರಿಸಿಕೊಳ್ಳುತ್ತದೆ. ಶೇ.80ರಷ್ಟು ಅಭ್ಯರ್ಥಿಗಳು ಹೊಸ ಮುಖಗಳಾಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆಗೆ ಎನ್‌ಸಿ ಪ್ರಣಾಳಿಕೆ ಬಿಡುಗಡೆ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್‌(ಎನ್ ಸಿ) ಸೋಮವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ಹಾಗೂ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರ ಮರುಸ್ಥಾಪನೆ ಸೇರಿದಂತೆ 12 ಗ್ಯಾರಂಟಿಗಳನ್ನು ಘೋಷಿಸಿದೆ. ಜೂನ್ 2000 ರಲ್ಲಿ, ಫಾರೂಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರವು ರಾಜ್ಯದಲ್ಲಿ 1953 ರ ಹಿಂದಿನ ಸಾಂವಿಧಾನಿಕ ಸ್ಥಾನಮಾನವನ್ನು ಪುನಃಸ್ಥಾಪಿಸಲು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.