ನ್ಯೂಸ್

ವಿದೇಶಿ ನೆಲದಲ್ಲಿ ಭಾರತದ ವಿರುದ್ಧ ಮಾತನಾಡಿದ ಮೊದಲ ಎಲ್​ಒಪಿ ರಾಹುಲ್ ಗಾಂಧಿ; ಕಿರಣ್ ರಿಜಿಜು ವಾಗ್ದಾಳಿ| Kiren Rijiju

Kiren Rijiju: ಕೊಲಂಬಿಯಾ ವಿಶ್ವವಿದ್ಯಾಲಯದ ಸಂವಾದದಲ್ಲಿ, ಭಾರತದ ಪ್ರಜಾಪ್ರಭುತ್ವದ ಮೇಲೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದಾಳಿ ಮಾಡುತ್ತಿದೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಭಾನುವಾರ(ಅ. 05) ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಎಎನ್​ಐ ಜೊತೆ ಮಾತನಾಡಿದ ಅವರು, ವಿದೇಶಿ ನೆಲದಲ್ಲಿ ಭಾರತದ ವಿರುದ್ಧ ಮಾತನಾಡಿದ ಮೊದಲ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಂದು ಕಿಡಿಕಾರಿದ್ದಾರೆ. ಭಾರತದ ಹೊರಗೆ ಹೋಗಿ ದೇಶ ಅಥವಾ ಸರ್ಕಾರದ ವಿರುದ್ಧ ಹೇಳಿಕೆ ನೀಡಿರುವ ಒಬ್ಬ ಎಲ್‌ಒಪಿಯನ್ನು ನನಗೆ ತೋರಿಸಿ. ಚುನಾವಣೆಯಲ್ಲಿ ಸೋತ ಬಳಿಕ ಇಂದಿರಾ ಗಾಂಧಿ ಕೂಡ ವಿರೋಧ ಪಕ್ಷದ ನಾಯಕರಾಗಿದ್ದರು. ಆದರೆ ಅವರು ಎಂದಿಗೂ ದೇಶದ ಹೊರಗೆ ಮಾತನಾಡಲಿಲ್ಲ. ಅವರಷ್ಟೇ ಅಲ್ಲ ಲಾಲ್ ಕೃಷ್ಣ ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್, ಶರದ್ ಪವಾರ್ ಆಗಿರಲಿ, ಅವರುಯ ಎಂದಿಗೂ ಹಾಗೆ ಮಾಡಲಿಲ್ಲ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತ ಜಾಗತಿಕ ನಾಯಕನಾಗಲು ಸಾಧ್ಯವಿಲ್ಲ ಎನ್ನುತ್ತಾರೆ. ಸಮಸ್ಯೆಯೆಂದರೆ, ವಿದೇಶದಲ್ಲಿರುವ ಜನರು ಭಾರತದಲ್ಲಿರುವ ಎಲ್ಲರೂ ರಾಹುಲ್ ಗಾಂಧಿಯವರಂತೆ ಎಂಬ ಭಾವನೆಯನ್ನು ಪಡೆದರೆ, ಅದು ನಮ್ಮ ದೇಶದ ಖ್ಯಾತಿಗೆ ಕಳಂಕ. ನಮ್ಮ ದೇಶದಲ್ಲಿ ಬುದ್ಧಿವಂತರಿದ್ದಾರೆ. ನಮಗೆ ಒಳ್ಳೆಯ ನಾಯಕರು ಮತ್ತು ಉತ್ತಮ ಸಿದ್ಧಾಂತ ಹೊಂದಿದವರಿದ್ದಾರೆ ಎಂದು ಹೇಳಿದ್ದಾರೆ.

ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ ಬಗ್ಗೆ ಕಾಂಗ್ರೆಸ್ ಮಾಡಿದ ಆರೋಪವನ್ನು ತಿರಸ್ಕರಿಸಿದ ಅವರು, ಕಾಂಗ್ರೆಸ್ ಅಭಿವ್ಯಕ್ತಿ ಸ್ವಾತಂತ್ರ್ಯದ ಕಲ್ಪನೆಯನ್ನು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಕಾಂಗ್ರೆಸ್​ನವರು ಬೆಳಗ್ಗೆಯಿಂದ ಸಂಜೆಯವರೆಗೆ ಪ್ರಧಾನಿ ಮೋದಿಯನ್ನು ನಿಂದಿಸುತ್ತಾರೆ. ಆದರೆ ನಮಗೆ ಮಾತನಾಡಲು ಸ್ವಾತಂತ್ರ್ಯವಿಲ್ಲ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದೇನು?

ಗುರುವಾರ (ಅ. 02) ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ,  ಭಾರತ ಎಂಜಿನಿಯರಿಂಗ್ ಮತ್ತು ಆರೋಗ್ಯ, ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಬಲವಾದ ಶಕ್ತಿಗಳನ್ನು ಹೊಂದಿದೆ. ಹೀಗಾಗಿ ನಾನು ನಮ್ಮ ದೇಶದ ಬಗ್ಗೆ ತುಂಬಾ ಆಶಾವಾದಿಯಾಗಿದ್ದೇನೆ. ಆದರೆ ಇದೇ ವೇಳೆ ದೇಶದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ದೇಶದ ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ದೊಡ್ಡ ಸವಾಲು ಎಂದು ಹೇಳಿದ್ದರು. (ಏಜೆನ್ಸೀಸ್)