ನ್ಯೂಸ್

ಕಾಂಗ್ರೆಸ್​ ಎಂದರೆ ದಾರಿತಪ್ಪಿಸುವ ಪಕ್ಷ; ರಾಹುಲ್​ ಸುಳ್ಳನ್ನೆ ಸತ್ಯವೆಂಬಂತೆ ಬಿಂಬಿಸುತ್ತಾರೆ: ಸಿಎಂ ನಯಾಬ್ ಸಿಂಗ್ ಸೈನಿ | Nayab singh saini

ಚಂಢೀಗಢ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ( Nayab singh saini), 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ವಂಚನೆ ನಡೆದಿದೆ ಎನ್ನುವ ಆರೋಪವನ್ನು ಶುದ್ಧ ಸುಳ್ಳು ಎಂದಿದ್ದಾರೆ.

ಮಧ್ಯಾಹ್ನ ರಾಹುಲ್​ ಗಾಂಧಿ ಮಾಡಿದ್ದ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಿಎಂ ಸೈನಿ, ರಾಹುಲ್​​ ಗಾಂಧಿ ಸುಳ್ಳುಗಳನ್ನೇ ಸತ್ಯ ಎಂದು ಬಿಂಬಿಸುವ ಮೂಲಕ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ, ಅವರ ಕುಟುಂಬದ ನಾಲ್ಕು ತಲೆಮಾರುಗಳು ಈ ದೇಶವನ್ನು ಆಳಿವೆ, ಆದರೂ ಅವರು ಸುಳ್ಳು ಹೇಳುತ್ತಲೇ ಇದ್ದಾರೆ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ದಾರಿತಪ್ಪಿಸುವ ಪಕ್ಷ ಎಂದರು. ರಾಹುಲ್​ ಗಾಂಧಿ ಆರೋಪವನ್ನು ಚುನಾವಣಾ ಆಯೋಗ ಮತ್ತು ಕೇಂದ್ರ ಸಚಿವ ಕಿರಣ್​ ರಿಜಿಜು ವಿಪಕ್ಷ ನಾಯಕರ ಹೇಳಿಕೆಯನ್ನು ತಳ್ಳಿಹಾಕಿದ್ದು, ಅನುಮಾನಗಳಿದ್ದರೆ ದೂರು ದಾಖಲಿಸುವಂತೆ ಸಲಹೆ ನೀಡಿದೆ.

ರಾಹುಲ್​ ಗಾಂಧಿ ಆರೋಪವೇನು..?

2 ಕೋಟಿ ಮತದಾರರಿರುವ ಹರಿಯಾಣದಲ್ಲಿ 25 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ, ಇದರಲ್ಲಿ 5.21 ಲಕ್ಷ ನಕಲಿ ಮತದಾರರು, 93,174 ಅನರ್ಹ ಮತದಾರರು ಮತ್ತು 19.26 ಲಕ್ಷ ಬೃಹತ್ ಮತದಾರರು ಸೇರಿದ್ದಾರೆ ಇದರ ಅರ್ಥ ಪ್ರತಿ ಎಂಟು ಮತದಾರರಲ್ಲಿ ಒಬ್ಬರು ನಕಲಿ, ಅಂದರೆ ಶೇಕಡಾ 12.5 ರಷ್ಟು, ಇದರ ಉದ್ದೇಶವೇ ಮೊಸದ ಮೂಲಕ ಕಾಂಗ್ರೆಸ್​ ಪಕ್ಷವನ್ನು ಸೋಲಿಸುವುದಾಗಿತ್ತು ಎಂದರು.

ಹರಿಯಾಣ ಚುನಾವಣೆಯ ದಿನ ಎಲ್ಲಾ ಎಕ್ಸಿಟ್​ ಪೋಲ್​ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದ ಗೆಲುವಿನ ಭವಿಷ್ಯ ನುಡಿದಿದ್ದವು, ಆದರೆ ಫಲಿತಾಂಶ ಬದಲಾಗಿ ಬಿಜೆಪಿ ಗೆಲುವು ಸಾಧಿಸಿವೆ ಎಂದರು. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಮಾಧ್ಯಮಗಳ ಮುಂದೆ ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಹೇಳಿರುವ ವೀಡಿಯೊವನ್ನು ಸಹ ಪ್ರದರ್ಶಿಸಿದರು.

ಚುನಾವಣಾ ಆಯೋಗವು ಮನಸ್ಸು ಮಾಡಿದರೆ ಒಂದು ಸೆಕೆಂಡಿನಲ್ಲಿ ನಕಲಿ ಮತದಾರರನ್ನು ತೆಗೆದುಹಾಕಬಹುದು. ಆದರೆ ಅವರು ಏಕೆ ಅದನ್ನು ಮಾಡುತ್ತಿಲ್ಲ? ಕಾರಣ ಸ್ಪಷ್ಟ, ಅವರು ಬಿಜೆಪಿಗೆ ಸಹಾಯ ಮಾಡುತಿದ್ದಾರೆ ಎಂದು ಹೇಳಿದರು. ಇದೇ ವೇಳೆ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಂದೇ ರೀತಿಯ ಚಿತ್ರಗಳಿಗೆ ವಿಭಿನ್ನ ಹೆಸರುಗಳನ್ನು ಹೊಂದಿರುವ ಮತದಾರರ ಗುರುತಿನ ಚೀಟಿಗಳ ನಿದರ್ಶನಗಳನ್ನು ತೋರಿಸಿದರು.(ಏಜೆನ್ಸೀಸ್​)