ನ್ಯೂಸ್

ಎಟಿಎಂ ಸರ್ಕಾರದ ಮುಲಾಜಿನಲ್ಲಿ ರಾಹುಲ್‌ಗಾಂಧಿ !

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರವೆಂಬುದು ಸತ್ಯವಾಗಿದೆ. ಈ ಕಾರಣಕ್ಕೆ ನಾಯಕ ರಾಹುಲ್‌ಗಾಂಧಿ ಮಧ್ಯಪ್ರವೇಶಿಸಲು ಮನಸ್ಸಿಲ್ಲ. ಎಟಿಎಂ ಸರ್ಕಾರದ ಮುಲಾಜಿನಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಛೇಡಿಸಿದರು.

ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಭ್ರಷ್ಟಾಚಾರ, ಕಮಿಷನ್‌ಗೆ ಒತ್ತಡ ಆರೋಪಗಳ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ಕಮಿಷನ್ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿ ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸರ್ಕಾರದಿಂದ ಕೈಗೆತ್ತಿಕೊಂಡ ಕಾಮಗಾರಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಬಿಬಿಎಂಪಿಗೆ ಹಣ ಬಿಡುಗಡೆಯಾಗುತ್ತದೆ. ಅದೇ ರೀತಿ ನಮ್ಮ ಕಾಲದಲ್ಲಿ 650 ಕೋಟಿ ರೂ. ಬಿಡುಗಡೆ ಮಾಡಿದ್ದೆವು. ಮೂರು ತಿಂಗಳು ಕಳೆದರೂ ತನಿಖೆ ಹೆಸರಲ್ಲಿ ಈ ಹಣ ಇಟ್ಟುಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.

ಕಮಿಷನ್ ವಿಚಾರವಾಗಿ ಗುತ್ತಿಗೆದಾರರೇ ಆಣೆ ಪ್ರಮಾಣ ಮಾಡುವಂತೆ ಹೇಳಿದ್ದಾರೆ. ವಿಷಯಾಂತರ ಮಾಡುವ ಬದಲು ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಕು. ತನಿಖೆ ನೆಪವೊಡ್ಡಿ ಬಿಡುಗಡೆಯಾದ ಹಣ ಹಿಡಿದಿಟ್ಟುಕೊಳ್ಳುವುದು ಸರಿಯಲ್ಲ ಎಂದು ಬೊಮ್ಮಾಯಿ ಆಕ್ಷೇಪಿಸಿದರು.

ಏನು ಒತ್ತಡವೋ

ಷಾಂಗ್ರಿಲಾದಲ್ಲಿ ಕಮಿಷನ್ ಮಾತುಕತೆ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಗುರುವಾರ ಹೇಳಿದ್ದರು. ಯಾರು ಕಮಿಷನ್ ಕೇಳಿಲ್ಲವೆಂದು ಸಚಿವರಿಗೆ ಇವತ್ತು ಕ್ಲೀನ್‌ಚಿಟ್ ನೀಡಿದ್ದಾರೆ ಅವರ ಮೇಲೆ ಏನು ಒತ್ತಡವಿದೆಯೋ ಗೊತ್ತಿಲ್ಲ ಎಂದು ಬೊಮ್ಮಾಯಿ ಮಾರ್ಮಿಕವಾಗಿ ಹೇಳಿದರು.

ಬಾಕಿ ಬಿಲ್ ಪಾವತಿಸಬೇಕೆಂದು ಮನವಿ ಮಾಡಿಕೊಳ್ಳಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಬಳಿ ಗುತ್ತಿಗೆದಾರರು ಅಲೆದಾಡುತ್ತಿದ್ದಾರೆ. ಬಿಬಿಎಂಪಿಗೆ ಬಿಡುಗಡೆ ಮಾಡಿದ ಹಣವನ್ನು ಕೊಡುತ್ತಿಲ್ಲ. ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಮೊತ್ತದಲ್ಲಿ ಈ ಬಿಲ್ ಪಾವತಿಸಲು ಅವಕಾಶವಿದೆ ಎಂದು ಹೇಳಿದರು.