ನ್ಯೂಸ್

ರಾಹುಲ್​ ಗಾಂಧಿ ಭಾರತ ವಿರೋಧಿ ಮನಸ್ಥಿತಿ ಹೊಂದಿದ್ದಾರೆ: ಕಂಗನಾ ರನೌತ್| Kangana Ranaut

Kangana Ranaut: ಭಾರತ ಮತ್ತು ಚೀನಾ ಗಡಿ ವಿಚಾರವಾಗಿ ಭಾರತೀಯ ಸಶಸ್ತ್ರ ಪಡೆಗಳ ವಿರುದ್ಧ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳ ವಿರುದ್ಧ ಸುಪ್ರೀಂ ಕೋರ್ಟ್ ಟೀಕೆ ವ್ಯಕ್ತಪಡಿಸಿದ ಬೆನ್ನಲ್ಲೇ, ವಿಪಕ್ಷ ನಾಯಕ ರಾಹುಲ್​ ಗಾಂಧಿ ಭಾರತ ವಿರೋಧಿ ಮನಸ್ಥಿತಿ ಹೊಂದಿದ್ದಾರೆ ಎಂದು ಬಿಜೆಪಿ ಸಂಸದೆ ಕಂಗನಾ ರನೌತ್ ಕಿಡಿಕಾರಿದ್ದಾರೆ.

ಸುಪ್ರಿಂ ಕೋರ್ಟ್ ರಾಹುಲ್​ರನ್ನು ಪ್ರಶ್ನಿಸಿದ ನಂತರ ಮಾತನಾಡಿರುವ ಕಂಗನಾ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಯಾವಾಗಲೂ ಭಾರತದ ವಿರುದ್ಧ ಮಾತನಾಡುತ್ತಾರೆ, ಅದು ಆರ್ಥಿಕತೆಯ ವಿಷಯವಾಗಿರಲಿ ಅಥವಾ ರಕ್ಷಣಾ ಪಡೆಗಳ ವಿಷಯವಾಗಿರಲಿ. ಶತ್ರು ರಾಷ್ಟ್ರಗಳಿಗೆ ಬೆಂಬಲವಾಗಿ ಮಾತನಾಡುತ್ತಾರೆ. ಅಲ್ಲದೆ, ರಾಹುಲ್​ ಗಾಂಧಿ ಭಾರತ ವಿರೋಧಿ ಮನಸ್ಥಿತಿ ಹೊಂದಿದ್ದಾರೆ" ಎಂದು ಕಂಗನಾ ರನೌತ್ ಗುಡುಗಿದ್ದಾರೆ.

ಇದು ಸುಪ್ರೀಂ ಕೋರ್ಟ್‌ನ ಸ್ವಾಗತಾರ್ಹ ಕ್ರಮ ಎಂದಿರುವ ರನೌತ್​, ಭವಿಷ್ಯದಲ್ಲಿ ಯಾರೇ ಆದರು ಭಾರತದ ಗೌರವ, ಸಮಗ್ರತೆ ಮತ್ತು ನೈತಿಕತೆಗೆ ಧಕ್ಕೆ ತರದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.

2022ರಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಆಕ್ರಮಣದ ಬಗ್ಗೆ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆಗಳನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದ ಒಂದು ದಿನದ ನಂತರ ರಾಹುಲ್​ ಗಾಂಧಿ ವಿರುದ್ಧ ಕಂಗನಾ ರನೌತ್​ ತೀಕ್ಷ್ಣ ದಾಳಿ ನಡೆಸಿದ್ದಾರೆ.

ಚೀನಾವು 2,000 ಚದರ ಕಿಲೋಮೀಟರ್ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂಬ ರಾಹುಲ್​ ಹೇಳಿಕೆಯ ವಿಶ್ವಾಸಾರ್ಹತೆಯ ಬಗ್ಗೆ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಕಳವಳ ವ್ಯಕ್ತಪಡಿಸಿತು, ಇಂತಹ ಹೇಳಿಕೆಗಳು ನಿಜವಾದ ಭಾರತೀಯನಿಗೆ ಯೋಗ್ಯವಲ್ಲ ಎಂದು ರಾಹುಲ್​ ಗಾಂಧಿಗೆ ಎಚ್ಚರಿಕೆಯನ್ನು ನೀಡಿದರು.