ನ್ಯೂಸ್

ಇದೇ ನೋಡಿ ನಮ್ಮ Someಕಲ್ಪ: ರಾಹುಲ್ ಗಾಂಧಿ ಹೊಸ ವರ್ಷದ ಸಂಕಲ್ಪ ತುಸು ವಿಭಿನ್ನ

ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.

ರಾಹುಲ್ ಗಾಂಧಿ

ಒಂದು ವರ್ಷ ಬಹಿರಂಗ ಸಭೆಗಳಲ್ಲಿ ಭಾಷಣ ಮಾಡಬಾರದು, ಯಾರಿಗೂ ಸಂದರ್ಶನ ಕೊಡಬಾರದು ಅಂತ ಸಂಕಲ್ಪ ಮಾಡಿದೀನಿ. ಯಾಕಂದ್ರೆ ಎಲ್ಲಾ ಭಾಷೆಯ ಸ್ಟಾ್ಯಂಡ್ ಅಪ್ ಕಾಮಿಡಿಯನ್​ಗಳು ನನ್ನ ಹತ್ತಿರ ದಯವಿಟ್ಟು ನಮ್ಮ ಹೊಟ್ಟೆ ಮೇಲೆ ಹೊಡೀಬೇಡಿ ಅಂತ ಬೇಡ್ಕೋತಿದಾರೆ. ಟಿವಿಯಲ್ಲಿ, ಯೂ ಟ್ಯೂಬ್​ನಲ್ಲಿ ಕಾಮಿಡಿ ಶೋ ನೋಡ್ತಿದ್ದವರೆಲ್ಲ ಈಗ ಅದನ್ನು ಬಿಟ್ಟು ನನ್ನ ಭಾಷಣ ನೋಡ್ತಿದಾರಂತೆ. ಕಪಿಲ್ ಶರ್ಮಾ ಖಿನ್ನತೆಗೆ ಜಾರಿದ್ದಕ್ಕೆ ನಾನೇ ಕಾರಣ ಅಂತಾರೆ. ನಾನು ಅಜ್ಞಾತವಾಸಕ್ಕೆ ಹೋದಾಗಲೆಲ್ಲ ‘ಬೇಗ ವಾಪಾಸು ಬನ್ನಿ. ನೀವು ಚುನಾವಣೆಗಳಲ್ಲಿ ಪ್ರಚಾರ ಭಾಷಣ ಮಾಡಲೇ ಬೇಕು, ಮೋದಿಗೆ ಬೈತಿರಬೇಕು’ ಅಂತ ಕೆಲವರು ಸಂದೇಶ ಕಳುಹಿಸುತ್ತಿದ್ದರು. ಈಗ ಗೊತ್ತಾಯ್ತು. ಅವರೆಲ್ಲ ಬಿಜೆಪಿ ಕಾರ್ಯಕರ್ತರಂತೆ!