ನ್ಯೂಸ್

ವಿದ್ಯುತ್ ದುಬಾರಿಯಾಗುತ್ತಿರುವ ಹಿಂದೆ ಅದಾನಿ ಕೈವಾಡ, 32 ಸಾವಿರ ಕೋಟಿ ಹಗರಣವಾಗಿದೆ: ರಾಹುಲ್ ಗಾಂಧಿ ಆರೋಪ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಅದಾನಿ ವಿಷಯ ಪ್ರಸ್ತಾಪಿಸಿ, ಅದಾನಿ 32 ಸಾವಿರ ಕೋಟಿ ರೂಪಾಯಿ ಹಗರಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅದಾನಿ ಅವರಿಂದಾಗಿಯೇ ವಿದ್ಯುತ್ ದುಬಾರಿಯಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ, "ಅದಾನಿ ಜಿ ಇಂಡೋನೇಷ್ಯಾದಲ್ಲಿ ಕಲ್ಲಿದ್ದಲು ಖರೀದಿಸುತ್ತಾರೆ. ಭಾರತಕ್ಕೆ ಬರುವ ಹೊತ್ತಿಗೆ ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಅವರು ಕಲ್ಲಿದ್ದಲಿನ ಬೆಲೆಯನ್ನು ಅತಿಯಾಗಿ ಇನ್‌ವಾಯ್ಸ್ ಮಾಡಿದ್ದಾರೆ'' ಎಂದರು.

ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸಿದ್ದಾರೆ. ಜತೆಗೆ ಇನ್ನು ವಿದ್ಯುತ್ ಬೆಲೆ ಏರಿಕೆಯಾಗುತ್ತಿದ್ದು, ಅದಾನಿ ಬಡವರಿಂದ ಹಣ ಪಡೆಯುತ್ತಿದ್ದಾರೆ ಎಂದು ದೂರಿದರು.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ವಿದ್ಯುತ್ ಸಬ್ಸಿಡಿ ನೀಡಿದ್ದು, ಮತ್ತೆ ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದಲ್ಲೂ ಅದೇ ರೀತಿ ಮಾಡುವ ಯೋಜನೆ ಹಾಕಿಕೊಂಡಿದೆ ಎಂದರು. ಅದಾನಿ ವಂಚಿಸಿದ ಕಾರಣ ತಮ್ಮ ಬಿಲ್‌ಗಳು ಹೆಚ್ಚಾಗುತ್ತಿವೆ ಎಂಬುದನ್ನು ಗ್ರಾಹಕರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಈ ವಿಷಯವನ್ನು ಭಾರತದಲ್ಲಿ ಎಂದಿಗೂ ಚರ್ಚಿಸಲಾಗಿಲ್ಲ. ಅದಾನಿಯವರನ್ನು ಪ್ರಧಾನಿ ಮೋದಿ ಮತ್ತೆ ಮತ್ತೆ ಉಳಿಸಿದ್ದಾರೆ. ಈ ವಿಷಯದ ಬಗ್ಗೆ ಪ್ರಧಾನಿ ಏಕೆ ಪ್ರತಿಕ್ರಿಯಿಸುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಅದಾನಿ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.