ನವದೆಹಲಿ: ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ಬೆನ್ನಲ್ಲೇ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪಿ. ಚಿದಂಬರಂ ಟ್ವೀಟ್ ಮೂಲಕ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಮೋದಿ ಹಾಗೂ ಅವರ ಯೋಜನೆಗಳಿಂದಲೇ ಭಾರತೀಯ ಆರ್ಥಿಕತೆ ನಾಶವಾಗುತ್ತಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
ಚಿದಂಬರಂ ಟ್ವೀಟ್ ಮಾಡಿ, ಬಿಜೆಪಿ 6 ವರ್ಷಗಳಿಂದ ದೇಶದಲ್ಲಿ ಅಧಿಕಾರದಲ್ಲಿದೆ. ಆಡಳಿತ ಮತ್ತು ಹಣಕಾಸು ಸಂಸ್ಥೆಗಳ ನಿಯಂತ್ರಣದಲ್ಲಿ ಅವರ ನಡೆ ಏನೆಂದು ಬಹಿರಂಗವಾಗಿದೆ. ಈ ಮೊದಲು ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್(ಪಿಎಂಸಿ), ಇದೀಗ ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದೆ. ಇವುಗಳ ಬಗ್ಗೆ ಸರ್ಕಾರಕ್ಕೇ ಏನಾದರೂ ಕಾಳಜಿ ಇದೆಯೇ? ತನ್ನ ಜವಾಬ್ದಾರಿಯಿಂದ ಸರ್ಕಾರ ಜಾರಿಕೊಳ್ಳಲು ಸಾಧ್ಯವೇ? ತನ್ನ ಹಾದಿಯಲ್ಲಿ ಮೂರನೇ ಬ್ಯಾಂಕ್ ಕೂಡ ಇದೆಯಾ? ಎಂದು ಪ್ರಶ್ನಿಸುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಸ್ಥಿ ಸಾಲಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಯೆಸ್ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ತನ್ನ ಸುಪರ್ದಿಗೆ ತೆಗೆದುಕೊಂಡು, ಬ್ಯಾಂಕ್ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಆಗಿ ಮಾಡಿದೆ. ಅಲ್ಲದೆ, ನಗದು ವಿತ್ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿಗದಿಗೊಳಿಸಲಾಗಿದೆ. ಇದರಿಂದ ಸಾವಿರಾರು ಗ್ರಾಹಕರು ಹಣ ತೆಗದುಕೊಳ್ಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಷೇರು ಮಾರುಕಟ್ಟೆಯಲ್ಲೂ ಯೆಸ್ ಬ್ಯಾಂಕ್ ಪಾಲು ಶೇ. 76 ರಷ್ಟು ಕುಸಿತ ಕಂಡಿದೆ. (ಏಜೆನ್ಸೀಸ್)