ಕೇರಳ: ಧಾರಕಾರ ಮಳೆಗೆ ವಯನಾಡಿನಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ಇದೀಗ ಮೃತಪಟ್ಟವರ ಸಂಖ್ಯೆ 200ಕ್ಕೂ ಅಧಿಕ ಎಂದು ಹೇಳಲಾಗಿದೆ. ನೂರಾರು ಮಂದಿ ಇನ್ನೂ ಮಣ್ಣು ಹಾಗೂ ಅವಷೇಶಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಒಂದೇ ಕುಟುಂಬದ ಹಲವರು ದುರಂತ ಸಾವು ಕಂಡಿದ್ದು, ಮೃತರ ದೇಹ ಹೊರತೆಗೆಯಲು ರಕ್ಷಣಾ ಪಡೆ ಹರಸಾಹಸ ಪಡುತ್ತಿದೆ. ಈ ಎಲ್ಲಾ ಬೆಳವಣಿಗೆಯ ನಡುವೆ ಇದೀಗ ದುರಂತ ಸಂಭವಿಸಿದ ಸ್ಥಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಭೇಟಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಲೈನ್ಮನ್ಗಳು ಕೆಲಸದ ವೇಳೆ ಜಾಗ್ರತೆವಹಿಸಿ
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೇರಳದ ವಯನಾಡಿನ ಚೂರಲ್ಮಲಾದಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಕಾಂಗ್ರೆಸ್ ಮುಖಂಡರೊಂದಿಗೆ ಪರಿಸ್ಥಿತಿ ಅವಲೋಕಿಸಿ ಸಂತ್ರಸ್ತರನ್ನು ಭೇಟಿಯಾದರು. ಕೇರಳ ಜಿಲ್ಲೆಯ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹೆಚ್ಚು ಹಾನಿಗೊಳಗಾಗಿವೆ.
ಭೂಕುಸಿತ ಉಂಟಾದ ವಯನಾಡಿನ ಚೂರಲ್ಮಲಾಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ರಾಹುಲ್ ಮತ್ತು ಪ್ರಿಯಾಂಕಾ, ಸಂತ್ರಸ್ತರನ್ನು ಮಾತನಾಡಿಸಿ, ಸಾಂತ್ವನ ಹೇಳಿದರು. ಭೂದುರಂತದಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇಂದಿಗೆ ರಕ್ಷಣಾ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೆ ಸುಮಾರು 1,000 ಜನರನ್ನು ರಕ್ಷಿಸಿರುವ ಸೇನೆಯು, 220ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದೆ.