ನ್ಯೂಸ್

ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಆರೋಪ; ಅಭಿ ಪಿಕ್ಚರ್ ಬಾಕಿ ಹೈ ಎಂದ ರಾಹುಲ್ ಗಾಂಧಿ| Rahul Gandhi

Rahul Gandhi: ದೇಶದ ಚುನಾವಣೆಗಳಲ್ಲಿ ಬಿಜೆಪಿಗೆ ಸಹಾಯ ಮಾಡಲು ಭಾರತೀಯ ಚುನಾವಣಾ ಆಯೋಗ ಮತಗಳ್ಳನದಲ್ಲಿ ತೊಡಗಿದೆ ಎಂದು ಆಯೋಗದ ವಿರುದ್ದ ಸಮರ ಸಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಆರೋಪವನ್ನು ಪುನಾರಾವರ್ತಿಸಿದ್ದು ಮಂಗಳವಾರ(ಆಗಸ್ಟ್ 12) ಅಭಿ ಪಿಕ್ಚರ್ ಬಾಕಿ ಹೈ ಎಂದು ಹೇಳಿದ್ದಾರೆ.

ಸಂಸತ್ ಬಳಿ ಮಾತನಾಡಿದ ರಾಹುಲ್ ಗಾಂಧಿ, ಕಳೆದ ವರ್ಷ ಕರ್ನಾಟಕ, ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಆಯೋಗ ಒಪ್ಪಂದ ಮಾಡಿಕೊಂಡಿತ್ತು. ಈ ಬಾರಿ ಬಿಹಾರದಲ್ಲಿ ಮತ ಪರಿಷ್ಕರಣೆ ಮೂಲಕ ಅದೇ ರೀತಿ ಮಾಡಲು ಸಿದ್ಧತೆ ನಡೆಸುತ್ತಿದೆ. ಒಂದು ಅಥವಾ 2 ಸ್ಥಾನಗಳಲ್ಲಿ ಮತಗಳ್ಳತನ ನಡೆದಿದಲ್ಲ. ಹಲವಾರು ಕ್ಷೇತ್ರಗಳಲ್ಲಿ ಇದನ್ನು ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ಮಟ್ಟದಲ್ಲಿ ಅಕ್ರಮವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಚುನಾವಣಾ ಆಯೋಗಕ್ಕೆ ಇದು ತಿಳಿದಿದೆ. ಮೊದಲು ಯಾವುದೇ ಪುರಾವೆ ಇರಲಿಲ್ಲ, ಈಗ ಇದೆ. ಆಯೋಗ ಒಂದು ವ್ಯಕ್ತಿ, ಒಂದು ಮತ ನಿಯಮವನ್ನು ಪಾಲಿಸುತ್ತಿಲ್ಲ. ಅಭಿ ಪಿಕ್ಚರ್ ಬಾಕಿ ಹೈ ಎಂದು ಕಿಡಿಕಾರಿದರು.

ಆಯೋಗದ ವಿರುದ್ಧ ವಿಪಕ್ಷಗಳ ಮೈತ್ರಿಕೂಟ ದೆಹಲಿಯ ಸಂಸತ್ ಬಳಿ ಇಂದು ಸಹ ಪ್ರತಿಭಟನೆ ಮಾಡಿತು. ಬಿಹಾರದ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ, ಮತಗಳ್ಳನ ವಿರೋಧಿಸಿ, ಮತದಾರರ ಪಟ್ಟಿಯ ಡಿಜಿಟಲ್ ದಾಖಲೆಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಆರೋಪವೇನು?

ದೇಶದ ಚುನಾವಣೆಗಳಲ್ಲಿ ಬಿಜೆಪಿಗೆ ಸಹಾಯ ಮಾಡಲು ಭಾರತೀಯ ಚುನಾವಣಾ ಆಯೋಗ ಮತಗಳ್ಳನದಲ್ಲಿ ತೊಡಗಿದೆ ಎಂದು ಆಯೋಗದ ವಿರುದ್ದ ಆರೋಪಕ್ಕೆ ಆಗಸ್ಟ್ 7ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪಿಪಿಟಿ ಮೂಲಕ ತಮ್ಮ ಆರೋಪಕ್ಕೆ ರಾಹುಲ್ ಗಾಂಧಿ ಪೂರಕವಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.

2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಕ್ರಮ ನಡೆದಿದ್ದು, ಬೆಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಮತಗಳ್ಳನ ನಡೆದಿದೆ. ನಮ್ಮ ಸಂಶೋಧನೆ ಪ್ರಕಾರ 6 ರೀತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಡುಪ್ಲಿಕೇಟ್ ಮತದಾರರು, ಒಬ್ಬನೇ ಮತದಾರರ ಹಲವು ರಾಜ್ಯಗಳಲ್ಲಿ ಮತ ಚಲಾಯಿಸುವುದು, ನಕಲಿ ಮನೆ ವಿಳಾಸಗಳು, ಒಂದೇ ಮನೆಯಲ್ಲಿ 80, 150 ಮತದಾರರು, ಮತದಾರರ ಪಟ್ಟಿಯಲ್ಲಿ ಮತದಾರರ ಫೋಟೋ ಇಲ್ಲದಿರುವುದು, ಫಾರ್ಮ್ 6ರ ದುರುಪಯೋಗವನ್ನು ಬಿಡುಗಡೆ ಮಾಡಿದ್ದರು.

ಆಡಳಿತರೂಢ ಬಿಜೆಪಿಯೊಂದಿಗೆ ಶಾಮೀಲಾಗಿದೆ ಆಯೋಗ, ವಿಧಾನಸಭೆ ಚುನಾವಣೆಗೆ ನೃತ್ಯ ಸಂಯೋಜನೆಯ ವೇಳೆಪಟ್ಟಿ ರಚಿಸುತ್ತದೆ ಎಂದು ಆರೋಪಿಸಿದ್ದ ಅವರು, ಆಯೋಗಕ್ಕೆ ಡಿಜಿಟಲ್ ಮತದಾರರ ಪಟ್ಟಿ ಒದಗಿಸಲು ನಿರಾಕರಿಸಿದೆ ಎಂದು ಹೇಳಿದ್ದರು.

ಚುನಾವಣಾ ಆಯೋಗ ಹೇಳಿದ್ದೇನು?

ರಾಹುಲ್ ಗಾಂಧಿಯವರ ಆರೋಪಗಳಿಗೆ ಅಂದೇ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ರಾಹುಲ್ ಗಾಂಧಿ ತಮ್ಮ ಆರೋಪದ ದಾಖಲೆಗಳಿಗೆ ಸಂಬಂಧಿಸಿದಂತೆ ಘೋಷಣಾ ಪತ್ರಕ್ಕೆ ಸಹಿ ಹಾಕಿ, ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿತ್ತು. (ಏಜೆನ್ಸೀಸ್)