ಮಂಡ್ಯ: ಜಗತ್ತಿಗೆ ಹೊಸ ರಾಗಿ ತಳಿಯನ್ನು ಪರಿಚಯಿಸಿದ ರಾಗಿ ಲಕ್ಷ್ಮಣಯ್ಯ ಅವರ ಹೆಸರಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳಲ್ಲಿ ನವೊದ್ಯಮ ಯೋಜನೆ ಹಾಗೂ ಸಂಶೋಧನಾ ಕೇಂದ್ರಗಳನ್ನು ತೆರೆಯಲು ಯೋಜಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ವಿ.ಸಿ ಫಾರ್ಮ್‌ನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿಯಿಂದ ಶನಿವಾರ ಆಯೋಜಿಸಿದ್ದ 27ನೇ ವರ್ಷದ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ವಿಜ್ಞಾನಿ ರಾಗಿ ಲಕ್ಷ್ಮಣಯ್ಯ ಅವರ ಹೆಸರು ಭೂಮಂಡಲ ಇರುವವರೆಗೆ ಚಿರಸ್ಥಾಯಿಯಾಗಿರಲಿದೆ. ಅವರ ಹೆಸರಿನಲ್ಲಿ ಸ್ಮಾರಕ ಸಮಿತಿ ಕಟ್ಟಿಕೊಂಡು ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಜಗತ್ತು ತನ್ನ ಎಲ್ಲ ಸ್ಥಾನಮಾನಗಳನ್ನು ಮೀರಿ ಮುಂದಕ್ಕೆ ದಾಪುಗಾಲು ಇಟ್ಟಿದೆ. ಆದರೆ ಜಗತ್ತಿಗೆ ಅನ್ನವನ್ನು ನೀಡುವ ರೈತರು ಮಾತ್ರ ತಮ್ಮ ಹೆಜ್ಜೆಯನ್ನು ಹಿಂದಕ್ಕೆ ಇಟ್ಟಿದ್ದಾರೆ. ಇದಕ್ಕೆ ಕಾರಣ ರೈತರಿಗೆ ಅವಕಾಶವಿಲ್ಲದಿರುವುದು. ಆದ್ದರಿಂದ ನಮ್ಮ ಸರ್ಕಾರವು ರೈತರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿ ಎತ್ತರಕ್ಕೆ ಹೊಯ್ಯಲಾಗುವುದು. ಕಷ್ಟಪಟ್ಟು ಬೆಳೆದ ಬೆಳೆಗಳು ಬರಗಾಲ ಅಥವಾ ವಿಪರೀತ ಮಳೆಯಿಂದ ಹಾನಿಗೊಳಗಾಗುತ್ತಿವೆ. ಆದ ಕಾರಣ ರೈತರು ಬೆಳೆಗಳಿಗೆ ವಿಮೆ ಮಾಡಿಸಿ ಹಾನಿಗೊಳಗಾದ ಸಂದರ್ಭದಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯಿರಿ ಎಂದು ಸಲಹೆ ನೀಡಿದರು.
ರಾಗಿ ಲಕ್ಷ್ಮಣಯ್ಯ ಕುರಿತು ಕೃಷಿ ವಿವಿಯ ನಿವೃತ್ತ ಸಂಶೋಧನಾ ನಿರ್ದೇಶಕ ಡಾ.ಟಿ.ಕೆ.ಪ್ರಭಾಕರ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಕೃಷಿ ವಿವಿಯ ಕುಲಪತಿ ಡಾ.ಎಸ್.ವಿ.ಸುರೇಶ್, ಸಮಿತಿಯ ಅಧ್ಯಕ್ಷ ಕೆ.ಬೋರಯ್ಯ, ಹೋರಾಟಗಾರರಾದ ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್ ಇತರರಿದ್ದರು.