ಅರಕಲಗೂಡು : ತಾಲೂಕಿನ ರಾಮನಾಥಪುರದಲ್ಲಿ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿ ರಥೋತ್ಸವ ಧಾರ್ಮಿಕ ವಿಧಾನಗಳ ಮೂಲಕ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮಗಳಿಂದ ನೆರವೇರಿತು.
ರಾಘವೇಂದ್ರಸ್ವಾಮಿ ಉತ್ತರಾದಿ ಮಠದಲ್ಲಿ ರಥೋತ್ಸವದ ಅಂಗವಾಗಿ ದೇಗುಲವನ್ನು ವಿವಿಧ ರೀತಿಯ ಹೂ ಹಾಗೂ ಚಿತ್ತಾರಗಳಿಂದ ಅಲಂಕಾರ ಮಾಡಲಾಗಿತ್ತ್ತು. ಮಠದ ವ್ಯವಸ್ಥಾಪಕ ಕನಕಾಚಾರ್ಯರ ಧಾರ್ಮಿಕ ಮುಖಂಡತ್ವದಲ್ಲಿ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಾನಗಳು ವಿಧಿವತ್ತಾಗಿ ನಡೆದವು. ಮಂಗಳವಾರ ಮಧ್ಯಾಹ್ನ ಶುಭಮುಹೂರ್ತದಲ್ಲಿ ರಾಘವೇಂದ್ರ ಸ್ವಾಮಿ ದೇಗುಲದ ಮುಂಭಾಗದಲ್ಲಿ ನಿಲ್ಲಿಸಿದ ರಥಕ್ಕೆ ಮಹಾ ಮಂಗಳಾರತಿ ನಂತರ ಉತ್ಸವ ಮೂರ್ತಿಯನ್ನು ಹೊರತಂದು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಭಕ್ತರು ಜಯಘೋಷಗಳ ನಡುವೆ ರಾಘವೇಂದ್ರ ಸ್ವಾಮಿಗೆ ಛತ್ರಿ ಚಾಮರ ಬೀಸುತ್ತಾ ರಥ ಎಳೆದು ಭಕ್ತಿ ಭಾವ ಸಮರ್ಪಿಸಿದರು. ಕಾವೇರಿ ಸೇತುವೆ ತನಕ ಸಾಗಿದ ರಥ ಸ್ವಸ್ಥಾನಕ್ಕೆ ಹಿಂದಿರುಗಿತು. ಭಜನಾ ಮಂಡಳಿ ಮಹಿಳೆಯರು ಭಜನೆ ಹಾಡುತ್ತಾ ಕೋಲಾಟ ಪ್ರದರ್ಶಿಸಿದರು. ಸಾರ್ವಜನಿಕರಿಗೆ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.