ಹೊಳೆಹೊನ್ನೂರು: ಒಂದೇ ಒಂದು ಹಸುವಿನ ಸಗಣಿಯಿಂದ 2.5 ಎಕರೆ ಅಡಕೆ ತೋಟಕ್ಕೆ ಬೇಕಾದ ಗೊಬ್ಬರ ತಯಾರಿಸಿಕೊಂಡು ರಾಸಾಯನಿಕಗಳಿಂದ ದೂರವಾಗಿ ಯಶಸ್ಸು ಕಂಡಿರುವ ಕೃಷಿಕ ಹಾರೋಬೆನವಳ್ಳಿ ಗ್ರಾಮದ ಕೆ.ರಾಘವೇಂದ್ರ ಮಾದರಿಯಾಗಿದ್ದಾರೆ.
ತೋಟದ ತ್ಯಾಜ್ಯವನ್ನು ತೋಟದಲ್ಲೇ ಸುರಿದು ಸಾವಯವ ಗೊಬ್ಬರ ತಯಾರಿಸುತ್ತಿದ್ದಾರೆ. 16 ವರ್ಷಗಳಿಂದ ತಾವೇ ತಯಾರಿಸುವ ಜೀವಾಮೃತದಿಂದ ತೋಟಕ್ಕೆ ಬೇಕಾದ ಫಲವತತ್ತೆ ನೀಡಿ ನಿರೀಕ್ಷಿತ ಪಸಲು ಪಡೆದು ಅಕ್ಕಪಕ್ಕದ ರೈತರು ಹುಬ್ಬೇರಿಸುವಂತೆ ಮಾಡಿದ್ದಾರೆ. ಶೂನ್ಯ ಬಂಡವಾಳ ಪದ್ಧತಿಯಿಂದ ಸಹಬಾಳ್ವೆ ಎನ್ನುವಂತೆ ತೋಟದಲ್ಲಿ ಅಡಕೆ, ಪಪ್ಪಾಯ, ಏಲಕ್ಕಿ, ಬಾಳೆ, ವೀಳ್ಯದೆಲೆ, ಮಾವು, ಹಲಸು ಬೆಳೆಯುತ್ತಿದ್ದಾರೆ.
50 ವರ್ಷಗಳಿಂದ ನಿರಂತರವಾಗಿ ರಾಸಾಯನಿಕ ನೀಡಿ ಭೂಮಿಯನ್ನು ಮಾತ್ರವಲ್ಲ ನಮ್ಮ ದೇಹವನ್ನು ರೋಗಗ್ರಸ್ತವನ್ನಾಗಿ ಮಾಡಿಕೊಂಡಿದ್ದೇವೆ. ಕೆಲ ಕಂಪನಿಗಳು ಮೈಕ್ರೋ ರಾಸಾಯನಿಕಗಳನ್ನು ನೀಡಿ ಸಾವಯವ ಎಂದು ರೈತರಿಗೆ ಮಣ್ಣೆರೆಚುತ್ತಿದ್ದಾರೆ. ನಿಜವಾದ ಸಾವಯವದಲ್ಲಿ ರಾಸಾಯನಿಕಗಳ ಬಳಕೆಯೇ ಇರುವುದಿಲ್ಲ. ಬದಲಿಗೆ ದೇಸಿ ರಾಸುಗಳ ಸಗಣಿ, ಗಂಜಲ ಸೇರಿ ಜಮೀನಿನಲ್ಲೇ ಸಿಗುವ ಕಸ-ಕಡ್ಡಿ ಸೇರಿಸಿ ನಾವೇ ಮಾಡಿಕೊಂಡು ಉಪಯೋಗಿಸುವುದು ಸಾವಯವ ಎನಿಸಿಕೊಳ್ಳುತ್ತದೆ. ಅಂಗಡಿಯಿಂದ ತಂದು ಬಳಸುವುದು ಸಾವಯವ ಅಲ್ಲ ಎನ್ನುತ್ತಾರೆ ರಾಘವೇಂದ್ರ.
ಜೀವಾಮೃತ ನೀಡುವುದರಿಂದ ಬೆಳೆಗಳಿಗೆ ಚೈತನ್ಯ ಬರುತ್ತದೆ. ಬೆಳೆಗಳಿಗೆ ರಾಸಾಯನಿಕ ನೀಡಿ ಅಧಿಕ ಇಳುವರಿ ಪಡೆಯುವುದು ಕ್ಷಣಿಕ. ಆದರೆ ಸಾವಯವ ಪದ್ಧತಿ ರೈತರ ತಲೆ ಕಾಯುತ್ತದೆ. ಎರಡೂವರೆ ಎಕರೆ ಅಡಕೆ ತೋಟಕ್ಕೆ ಜೀವಾಮೃತ ಬಿಟ್ಟರೆ ಮತ್ತೇನನ್ನೂ ಹಾಕುವುದಿಲ್ಲ. ಈ ಪದ್ಧತಿಯನ್ನು ಅನುಸರಿಸಿ ಬರೋಬ್ಬರಿ 15 ಕ್ವಿಂಟಾಲ್ ಒಣ ಅಡಕೆ ಪಡೆದಿದ್ದಾರೆ. ಕಳೆ ಗಿಡಗಳನ್ನು ಬೇರು ಸಹಿತ ಕಿತ್ತು ನಾಶಮಾಡದೆ ಕತ್ತರಿಸಿ ತ್ಯಾಜ್ಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಭೂಮಿ, ಆದಾಯ, ಆರೋಗ್ಯ ಈ ಮೂರರಲ್ಲೂ ಶ್ರೀಮಂತಿಕೆ ಸಾಧಿಸುವುದು ಸುಲಭವಲ್ಲ. ಜಮೀನುಗಳಲ್ಲಿ ಮಣ್ಣಿನ ಆರೋಗ್ಯ ಉತ್ತಮವಾಗಿದ್ದರೆ ರೈತರ ಆದಾಯ ದ್ವಿಗುಣ ಆಗುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ರಾಘವೇಂದ್ರ ಅವರ ಅಭಿಪ್ರಾಯ. ಅರ್ಧ ಎಕರೆಗೆ ಒಂದರಂತೆ ಡ್ರಮ್ ಬಳಸಿಕೊಂಡು 6 ಡ್ರಮ್‌ಗಳಲ್ಲಿ ತ್ಯಾಜ್ಯ ಕೊಳೆಸಿ ಗಿಡಕ್ಕೊಂದು ಲೀಟರ್‌ನಂತೆ ನಿಯಮಿತವಾಗಿ ಸುರಿಯುವ ಮೂಲಕ ಪಲವತ್ತತೆ ಕಾಪಾಡುತ್ತಿದ್ದಾರೆ.
ಪಾಳೇಕರ್ ಮಾದರಿ:
ತಿಂಗಳಿಗೊಮ್ಮೆ ಪಾಳೇಕರ್ ಪದ್ಧತಿಯಲ್ಲಿ ಹಸುವಿನ ಸಗಣಿ ಗಂಜಲದೊಂದಿಗೆ 2 ಕೆ.ಜಿ ಸಾವಯವ ಬೆಲ್ಲ. 2 ಕೆ.ಜಿ ದ್ವಿದಳ ದಾನ್ಯಗಳ ಹಿಟ್ಟಿನ ಮಿಶ್ರಣವನ್ನು ಒಂದು ವಾರದವರೆಗೆ ಡ್ರಮ್‌ಗಳಲ್ಲಿ ಕೊಳೆಹಾಕಿ ಬೆಳಗ್ಗೆ ಮತ್ತು ಸಂಜೆ ದಿನಕ್ಕೆರಡು ಬಾರಿ ತಿರುಗಿಸಲಾಗುತ್ತದೆ. ವಾರದ ನಂತರ ಗಿಡಗಳಿಗೆ ಜೀವಾಮೃತ ನೀಡುತ್ತಿದ್ದಾರೆ. ಸಣ್ಣ ಪುಟ್ಟ ರೋಗಗಳು ಕಾಣಿಸಿಕೊಂಡರೆ ನೀರಿನಲ್ಲಿ ಬೇವಿನ ಎಣ್ಣೆ ಮಿಶ್ರಣ ಮಾಡಿ ಸಿಂಪಡಿಸುತ್ತಾರೆ. 10 ವರ್ಷದಿಂದ ತೋಟದಲ್ಲಿ ಅಡಕೆ ಮರಗಳ ತಲೆ ಹೋಗುವುದು ನಿಯಂತ್ರಣಕ್ಕೆ ಬಂದಿದೆ. ಹತ್ತಾರು ವರ್ಷಗಳಿಂದ ತೋಟದಲ್ಲಿ ಟ್ರಾೃಕ್ಟರ್ ಬಳಸಿ ಉಳುಮೆಯನ್ನೂ ಮಾಡಿಲ್ಲ. ಮೊದಲು ಕುಡುಗೊಲಿನಿಂದ ಕತ್ತರಿಸುತ್ತಿದರು. ಕೆಲ ವರ್ಷಗಳಿಂದ ಹುಲ್ಲು ಕತ್ತರಿಸುವ ಯಂತ್ರ ಬಳಸಿ ಕಳೆ ನಿಯಂತ್ರಣ ಮಾಡುತ್ತಿದ್ದಾರೆ.
ಭೂಮಿಯು ಫಲವತತ್ತೆಯಲ್ಲಿ ಶ್ರೀಮಂತವಾಗಿರಬೇಕು. ನಮ್ಮ ಆರೋಗ್ಯವೂ ಸುಸ್ಥಿತಿಯಲ್ಲಿರಬೇಕು. ಪ್ರತಿ ರೈತನೂ ಜೀವಾಮೃತ ಬಳಸಿದರೆ ಶೂನ್ಯ ಬಂಡವಾಳದ ಕೃಷಿಯಲ್ಲಿ ಅಂದುಕೊಂಡತೆ ಯಶಸ್ಸು ಸಾಧಿಸಬಹುದು. ಭೂಮಿ ಆರೋಗ್ಯವಾಗಿದ್ದರೆ ನಮ್ಮ ದೇಹ ಸ್ವಸ್ಥವಾಗಿರುತ್ತದೆ. ಬೆಳೆಗಳ ಬೆಳವಣಿಗೆಯಲ್ಲಿ ಜೀವಾಮೃತ ಆನೆ ಬಲ ನೀಡುತ್ತದೆ. ತೋಟ ನಿರ್ಮಾಣ ಮಾಡಿದಾಗಿನಿಂದ ಇಲ್ಲಿಯವರೆಗೆ ರಾಸಾಯನಿಕ ಬಳಸಿಲ್ಲ. ಬೆಳೆಗೂ ರೋಗಗಳು ಬಾಧಿಸುತ್ತಿಲ್ಲ ಎನ್ನುತ್ತಾರೆ ಕೆ.ರಾಘವೇಂದ್ರ.