ನ್ಯೂಸ್

16 ಗಂಟೆಗಳ ಕಾಲ ಸಾಧುವಿನಂತೆ ಇದಕ್ಕಾಗಿ ಕೆಲಸ ಮಾಡಿದ್ದೀನಿ: ರಾಧಿಕಾ ಧರಿಸಿದ್ದ ಲೆಹೆಂಗಾ ಬಗ್ಗೆ ಡಿಸೈನರ್​ ಮಾತು

ಮುಂಬೈ: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲಯನ್ಸ್ ಸಂಸ್ಥಾಪಕ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ಅದ್ಧೂರಿ ವಿವಾಹ ಸಮಾರಂಭಕ್ಕೆ ಇದೀಗ ಮುಕ್ತಾಯಗೊಂಡಿದ್ದು, ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿತ್ರರಂಗದ ಸ್ಟಾರ್​ಗಳು, ರಾಜಕೀಯ ಗಣ್ಯರು, ಉದ್ಯಮಿಗಳು ಸೇರಿದಂತೆ ಹೆಸರಾಂತ ವ್ಯಕ್ತಿಗಳು ಅನಂತ್​ ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಮುಖೇಶ್ ಅಂಬಾನಿ ದಂಪತಿಯ ಪುತ್ರನ ಗ್ರ್ಯಾಂಡ್​ ವಿವಾಹ ಮಹೋತ್ಸವದ ಸಡಗರ, ಸಂಭ್ರಮ ಸಾಮಾನ್ಯ ಜನರ ಹುಬ್ಬೇರಿಸಿದೆ.

ಅನಂತ್-ರಾಧಿಕಾ ಮದುವೆಗೆ ಮುಖೇಶ್ ಅಂಬಾನಿ ಧರಿಸಿದ್ದ ದುಬಾರಿ ಬೆಲೆಯ ವಾಚ್​ ಕಂಡು ನೆಟ್ಟಿಗರು ಭಾರೀ ಆಶ್ಚರ್ಯಚಕಿತರಾಗಿದ್ದರು. ಅದರಲ್ಲೂ ಬ್ರ್ಯಾಂಡಡ್​ ವಾಚ್​ನ ಬೆಲೆ ಬರೋಬ್ಬರಿ 53 ಕೋಟಿ ರೂ. ಎಂಬ ವಿಷಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೀಗ ರಾಧಿಕಾ ಮರ್ಚೆಂಟ್​ ಅವರು ತಮ್ಮ ವಿವಾಹದ ದಿನ ಧರಿಸಿದ್ದ ವಿಶೇಷ ಲೆಹಂಗಾ ಬಗ್ಗೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದರ ಬೆಲೆಗಿಂತಲೂ ವಿನ್ಯಾಸ ಯಾರದ್ದು ಎಂಬ ಹತ್ತು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಕಡೆಗೂ ಈಗ ಇದಕ್ಕೆ ಉತ್ತರ ಸಿಕ್ಕಿದೆ. ರಾಧಿಕಾ ಧರಿಸಿದ್ದ ಲೆಹಂಗಾ ವಿನ್ಯಾಸ ಮಾಡಿದವರು ಹೆಸರಾಂತ ಡಿಸೈನರ್​ ಜಯಶ್ರೀ ಬರ್ಮನ್.

ಶನಿವಾರದಂದು ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಮಿರ ಮಿರ ಮಿಂಚಿದ ರಾಧಿಕಾ ಮರ್ಚೆಂಟ್, "ಅಂಬಾನಿ ಪಿಂಕ್" ಬಣ್ಣದ ಲೆಹೆಂಗಾದಲ್ಲಿ ನೆರೆದಿದ್ದ ಗಣ್ಯರ ಗಮನಸೆಳೆದರು. ಡಿಸೈನರ್ ಜೋಡಿಯಾದ ಅಬು ಜಾನಿ ಸಂದೀಪ್ ಖೋಸ್ಲಾ ಅವರ ಸಹಯೋಗದೊಂದಿಗೆ ಈ ಗ್ರ್ಯಾಂಡ್​ ಉಡುಗೆಯನ್ನು ತಯಾರಿಸಲಾಗಿದೆ. "ಈ ಪಿಂಕ್​ ಲೆಹಂಗಾವನ್ನು ರಚಿಸಲು ನನಗೆ ಬರೋಬ್ಬರಿ ಒಂದು ತಿಂಗಳು ಪೂರ್ತಿ ಬೇಕಾಯಿತು. ದೆಹಲಿಯಲ್ಲಿನ ಓಕ್ಲಾ ಸ್ಟುಡಿಯೋದಲ್ಲಿ ಪ್ರತಿದಿನ 16 ಗಂಟೆಗಳ ಕಾಲ ಇದಕ್ಕಾಗಿ ಕೆಲಸ ಮಾಡಿದ್ದೇನೆ. ಸಾಧುವಿನಂತೆ ನಿರಂತರವಾಗಿ ಶ್ರಮಿಸಿದ್ದು, ಅದಕ್ಕೊಂದು ಮೆರುಗು ಕೊಡಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು. ಇಂದು ಅದು ಈಡೇರಿದೆ" ಎಂದು ಜಯಶ್ರೀ ಬರ್ಮನ್ ಹೇಳಿದ್ದಾರೆ,(ಏಜೆನ್ಸೀಸ್).