ನ್ಯೂಸ್

ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ. ರಾಧಾಕೃಷ್ಣನ್ NDA ಅಭ್ಯರ್ಥಿ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಘೋಷಣೆ

ನವದೆಹಲಿ: ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ. ರಾಧಾಕೃಷ್ಣನ್​ರನ್ನು ಎನ್​ಡಿಎ ಅಭ್ಯರ್ಥಿಯಾಗಿ ಬಿಜೆಪಿ ಅಧಿಕೃತವಾಗಿ ಘೋಷಿಸಿದೆ. ದೆಹಲಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಪ್ರಸ್ತುತ ಮಹಾರಾಷ್ಟ್ರ ರಾಜ್ಯಪಾಲರಾಗಿರುವ ರಾಧಾಕೃಷ್ಣನ್​ರನ್ನು ಎನ್​ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ.

ಇಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿಯ ಸಂಸದೀಯ ಮಂಡಳಿ ಸಭೆಯಲ್ಲಿ ರಾಧಾಕೃಷ್ಣನ್ ಅವರ ಹೆಸರನ್ನು ಪಕ್ಷ ಅಂತಿಮಗೊಳಿಸಿತು. ಇದೇ ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲರನ್ನು ಕಣಕ್ಕಿಳಿಸಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದೆ.

ಜಗದೀಪ್ ಧನಕರ್​

ಈ ನಿರ್ಧಾರಕ್ಕೆ, ಜುಲೈ 21ರಂದು ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್​ ಕೊಟ್ಟ ಹಠಾತ್ ರಾಜೀನಾಮೆಯೇ ಕಾರಣ. ಸಂಸತ್ತಿನ ಮಳೆಗಾಲದ ಅಧಿವೇಶನದ ಮಧ್ಯೆಯೇ ಆರೋಗ್ಯ ಸಮಸ್ಯೆಯನ್ನು ಮುಂದಿಟ್ಟ ಜಗದೀಪ್​, ತಮ್ಮ ಹುದ್ದೆಯಿಂದ ಹೊರನಡೆಯುವುದಾಗಿ ರಾಜೀನಾಮೆ ಘೋಷಿಸಿದರು. ಇದರ ಬೆನ್ನಲ್ಲೇ, ಉಪರಾಷ್ಟ್ರಪತಿ ಚುನಾವಣಾ ರೇಸ್​ಗೆ ಭಾರೀ ಪೈಪೋಟಿ ಶುರುವಾಯಿತು. ಈಗ ಎನ್​ಡಿಎಯಿಂದ ರಾಧಾಕೃಷ್ಣನ್ ಅವರು ಅಖಾಡಕ್ಕಿಳಿದಿರುವುದು ಸದ್ಯ ಹಲವರ ಕುತೂಹಲಕ್ಕೆ ಕಾರಣವಾಗಿದೆ.