ನ್ಯೂಸ್

ಎಚ್‌ಡಿಕೆ ವಿರುದ್ಧ ವರ್ಣಬೇಧ ಹೇಳಿಕೆ; ಸಚಿವ ಜಮೀರ್ ವಿರುದ್ಧ ಜೆಡಿಎಸ್ ಪ್ರತಿಭಟನೆ|Racist statement against HDK

ಬೆಂಗಳೂರು: ಮೈಬಣ್ಣ ಪ್ರಸ್ತಾಪಿಸಿ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ನಿಂದಿಸಿರುವ ವಕ್ಫ್ ಸಚಿವ ಸಚಿವ ಜಮೀರ್ ಅಹಮದ್ ವಿರುದ್ಧ ಜೆಡಿಎಸ್ ಉಗ್ರ ಪತಿಭಟನೆ(protest against Minister Zameer) ನಡೆಸಿತು.

ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಜಮೀರ್ ಭೂತ ದಹನ ಮಾಡಿದರಲ್ಲದೆ, ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯ ಮಾಡಿದರು.

ಜೆಡಿಎಸ್ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನವನದ ಬಳಿ ಪ್ರತಿಭಟನೆ ನಡೆಸಿ ಜಮೀರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಘೋಷಣೆಗಳ ಫಲಕಗಳನ್ನು ಪ್ರದರ್ಶಿಸಿ ಉಗ್ರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಗ್ಗೆ ಕೀಳು ಮಟ್ಟದ ಭಾಷೆ ಬಳಿಸಿರುವುದು ಅಕ್ಷಮ್ಯ. ಅವರ ಮಾತುಗಳು ಅವರ ಕೊಳಕು ಮನಸ್ಥಿತಿಯನ್ನು ಬಿಂಬಿಸುತ್ತವೆ. ಜಮೀರ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ಸರ್ಕಾರಕ್ಕೆ ನೈತಿಕತೆ ಇದ್ದರೆ ಕ್ರಮ ಕೈಗೊಳ್ಳಿ

ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿರುವ ಜಮೀರ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ ಈ ಕ್ರಮ ಕೈಗೊಳ್ಳಬೇಕು ಎಂದರು.

ಕ್ರಮ ಜರುಗಿಸದಿದ್ದರೆ ರಾಜ್ಯಪಾಲರಿಗೆ ದೂರು

ಜಮೀರ್ ವರ್ಣಬೇಧ ನೀತಿ ಮೂಲಕ ಜನಾಂಗೀಯ ನಿಂದನೆ ಮಾಡಿದ್ದಾರೆ. ಒಕ್ಕಲಿಗ ಸಮುದಾಯವನ್ನು ಅಪಮಾನಿಸಿದ್ದಾರೆ. ಇನ್ನು ಮುಂದೆ ಇದೇ ರೀತಿ ನಾಲಿಗೆ ಹರಿಯಬಿಟ್ಟರೆ, ನಾಡಿನ ಜನರು ತಕ್ಕ ಶಾಸ್ತಿ ಮಾಡುತ್ತಾರೆ. ಒಂದು ವೇಳೆ ಸಂಪುಟದಿಂದ ವಜಾ ಮಾಡದಿದ್ದರೆ ಜಮೀರ್ ಹೇಳಿಕೆ ವಿರೋಧಿಸಿ ಕಪ್ಪುಬಾವುಟ ಪ್ರದರ್ಶಿಸುತ್ತೇವೆ. ರಾಜ್ಯಪಾಲರು, ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಹೇಳಿದರು.

ಜಮೀರ್ ಇನ್ನೊಂದು ಜನ್ಮ ಎತ್ತಿ ಬರಬೇಕು

ಜಮೀರ್ ಅಹಮದ್ ಹೇಳಿಕೆ ಶೋಭೆ ತರುವುದಿಲ್ಲ. ಅವರು ಇಂಥ ಕೆಟ್ಟ ಹೇಳಿಕೆ ನೀಡಿದ್ದು ಇದೇ ಮೊದಲಲ್ಲ, ಎಲ್ಲದಕ್ಕೂ ಒಂದು ತಾಳ್ಮೆ ಇರುತ್ತದೆ. ಕುಮಾರಣ್ಣ, ದೇವೇಗೌಡರ ಕುಟುಂಬದ ಖರೀದಿ ಮಾಡಲು ಜಮೀರ್ ಇನ್ನೊಂದು ಜನ್ಮ ಎತ್ತಿ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಪಕ್ಷದ ಪರಮೋಚ್ಚ ನಾಯಕ ದೇವೇಗೌಡರು ಒಂದು ಸಮುದಾಯದ ನಾಯಕರಲ್ಲ. ರಾಜ್ಯದ ಏಳೂವರೆ ಕೋಟಿ ಜನರ ನಾಯಕ. ಜಮೀರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ರಾಜ್ಯ ಸರ್ಕಾರ ಕೂಡಲೇ ಜಮೀರ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಶೈಲಜಾ ರಾವ್, ನಾರಾಯಣ ಸ್ವಾಮಿ, ರಮೇಶ್‌ರಾವ್, ಮಂಗಳಮ್ಮ, ಹರಿಬಾಬು, ಮುನಿಸ್ವಾಮಿ, ಸಯ್ಯದ್ ಸೇರಿದಂತೆ ಪಕ್ಷದ ಬೆಂಗಳೂರಿನ ಅನೇಕ ಮುಖಂಡರು ಭಾಗಿಯಾಗಿದ್ದರು.

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಪ್ರತಿಭಟನೆ ಬಳಿಕ ಜಮೀರ್‌ ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿ ಪ್ರತಿಭಟನಾಕಾರರು ರಸ್ತೆಗೆ ಇಳಿದಾಗ ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.