ಬೆಂಗಳೂರು: 'ಲವ್ ಮಾಕ್ಟೇಲ್ 2' ಸಿನಿಮಾದಲ್ಲಿ ಸಿರಿ ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಿ, ಸಿನಿಪ್ರಿಯರ ಮನಗೆದ್ದ ನಟಿ ರೆಚಲ್ ಡೇವಿಡ್ ಇದೀಗ ಮತ್ತೊಮ್ಮೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದು, 'chef ಚಿದಂಬರ' ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ.
ಎಂ.ಆನಂದರಾಜ್ ನಿರ್ದೇಶನದ ಹಾಗೂ ಅನಿರುದ್ದ್ ಜತ್ಕರ್ ನಾಯಕನಾಗಿ ನಟಿಸಿರುವ "chef ಚಿದಂಬರ" ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ರೆಚಲ್, "ಅನು" ಎಂಬ ಪಾತ್ರದಲ್ಲಿ ಪ್ರೇಕ್ಷಕರ ಎದುರು ಹಾಜರಾಗಲಿದ್ದಾರೆ. ಇತ್ತೀಚಿಗಷ್ಟೇ ಚಿತ್ರತಂಡ ನಟಿಯ ಪಾತ್ರವನ್ನು ಪರಿಚಯಿಸುವ ವಿಶೇಷ ಪೋಸ್ಟರ್ವೊಂದನ್ನು ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್ನಲ್ಲಿ ಬಿಡುಗಡೆಗೊಳಿಸಿದೆ.
ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ "chef ಚಿದಂಬರ" ಸದ್ಯದಲ್ಲೇ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈಗಾಗಲೇ ಪೋಸ್ಟರ್, ಕ್ಯಾರೆಕ್ಟರ್ ಟೀಸರ್ ಮೂಲಕ ಗುರುತಿಸಿಕೊಂಡಿರುವ ಈ ಚಿತ್ರದ ಬಿಡುಗಡೆ ಎಂದು ಎಂಬುದರ ಮಾಹಿತಿ ಶೀಘ್ರವೇ ಪ್ರಕಟವಾಗಲಿದೆ.
ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಸಿನಿಮಾಗೆ ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನವಿದೆ.